Advertisement

ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ

03:42 PM May 16, 2019 | Team Udayavani |

ಚಿಕ್ಕಮಗಳೂರು: ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಂಡು ಸಂಸ್ಕರಿಸಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯಂತ್ರವನ್ನು ಲಯನ್ಸ್‌ ಸೇವಾ ಸಂಸ್ಥೆ ಮರ್ಲೆಯ ಶ್ರೀಕಲ್ಮರುಡೇಶ್ವರ ಪ್ರೌಢಶಾಲೆಗೆ ನೀಡಿದೆ.

Advertisement

ಮರ್ಲೆಯ ಪ್ರೌಢಶಾಲೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೆಂಗಳೂರಿನ ಕೊಡುಗೆಹಳ್ಳಿ ಲಯನ್ಸ್‌ಕ್ಲಬ್‌ ವಲಯಾಧ್ಯಕ್ಷ ಬಿ.ಅನಿಲಕುಮಾರ್‌ ದಂಪತಿ ಲಕ್ಷಾಂತರ ರೂಪಾಯಿ ಮೌಲ್ಯದ ಕುಡಿಯುವ ನೀರಿನ ಯಂತ್ರವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಕೊಡುಗೆಹಳ್ಳಿ ಲಯನ್ಸ್‌ಕ್ಲಬ್‌ ವಲಯಾಧ್ಯಕ್ಷ ಬಿ.ಅನಿಲಕುಮಾರ್‌, ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ಸಹಜವಾಗಿ ನೀರಿನ ಅಂಶ ಗಾಳಿಯಲ್ಲಿ ಬೆರೆತಿರುತ್ತದೆ. ವಿದ್ಯುತ್‌ ಅಥವಾ ಯುಪಿಎಸ್‌ ಸಂಪರ್ಕದ ನೆರವಿನೊಂದಿಗೆ ವಾತಾವರಣದ ನೀರಿನ ಅಂಶವನ್ನು ಹೀರಿಕೊಳ್ಳುವ ಈ ಯಂತ್ರ ಅದನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾದ ನೀರಾಗಿ ಪರಿವರ್ತಿಸಿ ನೀಡುತ್ತದೆ. ಯುದ್ಧ ಕಾಲ-ಗಡಿಭಾಗದಲ್ಲಿ ಯೋಧರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಇಂತಹ ಯಂತ್ರಗಳನ್ನು ಆವಿಷ್ಕಾರಗೊಳಿಸಿದೆ. ಮಳೆಯ ಅಭಾವದಿಂದ ಕುಡಿಯುವ ನೀರಿಗೆ ಹಾಹಾಕಾರವಿರುವ ಸಂದರ್ಭದಲ್ಲಿ ಇಂತಹ ಯಂತ್ರಗಳು ಸ್ವಲ್ಪಮಟ್ಟಿನ ತೊಂದರೆಯನ್ನು ನೀಗಿಸುತ್ತವೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ಶುದ್ಧ ನೀರು ಸದಾ ಸಿಗಬೇಕೆಂಬ ಅಪೇಕ್ಷೆಯಿಂದ ಐದು ಯಂತ್ರಗಳನ್ನು ನೀಡುತ್ತಿದ್ದು, ಮರ್ಲೆ ಶಾಲೆಯನ್ನು ಆಯ್ಕೆ ಮಾಡಲಾಗಿದೆ. ನೀರಿನ ಟ್ಯಾಂಕ್‌, ನಳ ಅಥವಾ ಕೊಳವೆಬಾವಿಯ ಅಗತ್ಯವಿಲ್ಲದೆ 14.5ಲೀಟರ್‌ ನೀರು ಪೂರೈಸುವ ಯಂತ್ರ ಇದಾಗಿದೆ. ಸೂಕ್ತ ಸೂರ್ಯನ ಬೆಳಕು ಮತ್ತು ಗಾಳಿಯನ್ನು ಬಳಸಿಕೊಂಡು ಪ್ರತಿನಿತ್ಯ 25 ಲೀಟರ್‌ ಶುದ್ಧ ನೀರು ಪಡೆಯಬಹುದು ಎಂದು ತಿಳಿಸಿದರು.

ಲಯನ್ಸ್‌ ಜಿಲ್ಲಾ ನಿಕಟಪೂರ್ವ ರಾಜ್ಯಪಾಲ ಎಚ್.ಆರ್‌.ಹರೀಶ್‌ ಮಾತನಾಡಿ, ವೃತ್ತಿಯಲ್ಲಿ ವಕೀಲರಾಗಿರುವ ಅನಿಲ್ ಅವರು ತಮ್ಮ ಗ್ರಾಹಕ ಕಂಪನಿಯ ನೆರವಿನೊಂದಿಗೆ ಕುಡಿಯುವ ನೀರಿನ ಐದು ಯಂತ್ರಗಳನ್ನು ಕೊಡುಗೆ ನೀಡುವ ಭರವಸೆ ನೀಡಿದ್ದರು. ಸದಾ ಬರದ ಛಾಯೆ, ನೀರಿನ ಅಭಾವ‌, ಮಳೆ ಕೊರತೆಯಿಂದ ಇರುವ ಮರ್ಲೆ ಗ್ರಾಮದ ಶಾಲೆಯನ್ನು ಆಯ್ಕೆ ಮಾಡಲಾಯಿತು. ನಿಜಕ್ಕೂ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ವರ್ಷಪೂರ್ತಿ ಸಿಗುವಂತಾಗಿದೆ ಎಂದರು.

Advertisement

ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ನಡುವೆ ಸಾಮಾನ್ಯವಾಗಿ ಸಾಕಷ್ಟು ವ್ಯತ್ಯಾಸವಿದೆ. ಆದರೆ ಮಂಗಳೂರು ಜಿಲ್ಲೆಯಲ್ಲಿ ಮಾತ್ರ ಇಂತಹ ವ್ಯತ್ಯಾಸ ಕಡಿಮೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ವಿಶೇಷವಾಗಿ ಹಳೆಯ ವಿದ್ಯಾರ್ಥಿಗಳು ಅಗತ್ಯವಿರುವ ಶಾಲೆಗಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ಶುಭ್ರ ನೆಲಹಾಸು, ಕ್ರೀಡಾ ಸಾಮಗ್ರಿಗಳು, ಉತ್ತಮ ಬೆಳಕು ಮತ್ತು ಗಾಳಿಯ ವ್ಯವಸ್ಥೆ ಕಂಪ್ಯೂಟರ್‌, ಇಂಟರ್‌ನೆಟ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ. ಇಂತಹ ಪ್ರವೃತ್ತಿ ಹೆಚ್ಚಾದರೆ ಶಿಕ್ಷಣ ಸಬಲೀಕರಣವಾಗುತ್ತದೆ ಎಂದರು.

ಲಯನ್ಸ್‌ ಸದಸ್ಯರು ಸ್ವಂತ ದುಡಿಮೆಯ ಗಳಿಕೆ ಹಾಗೂ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡು ಸಾಧ್ಯವಾದಷ್ಟು ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಸಮಾನತೆ ಹಾಗೂ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಸ್ಪರ್ಧಾತ್ಮಕ ಬದುಕಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವಲ್ಲಿ ಪ್ರಾಥಮಿಕ ಸೌಕರ್ಯಗಳು ಹೆಚ್ಚಾಗಬೇಕೆಂದರು.

ಚಿಕ್ಕಮಗಳೂರು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸಿ.ಪಿ.ಸುರೇಶ್‌ ಮಾತನಾಡಿ, ಶುದ್ಧ ಕುಡಿಯುವ ನೀರು ಮಕ್ಕಳಿಗೆ ಪೂರೈಸ‌ುವುದು ಆದ್ಯತೆಯಾಗಬೇಕು. ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಶಾಲೆಯಲ್ಲಿ ನಯ, ವಿನಯ, ಶಿಸ್ತು, ಮಾನವೀಯ ಅಂಶಗಳನ್ನು ಕಲಿಸಬೇಕು. ಅಂಕ ಗಳಿಗಿಂತ ಸಂಸ್ಕಾರ ಮುಖ್ಯವಾದರೆ, ನೆರೆಹೊರೆಯವರನ್ನು ಪ್ರೀತಿಸುವ, ಹಿರಿಯರನ್ನು ಗೌರವಿಸುವ ಯುವಪಡೆ ನಮ್ಮದಾಗುತ್ತದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಲಯನ್ಸ್‌ ಅಪೂರ್ವ ಕೊಡುಗೆ ಈ ಶಾಲಾಮಕ್ಕಳ ಅದೃಷ್ಟ. ಕುಡಿಯುವ ನೀರಿಗೆ ಊರೇ ಪರದಾಡುತ್ತಿದೆ. ಅಂತರ್ಜಲ ಬತ್ತಿದ್ದು, ಕೆರೆ-ಕಟ್ಟೆಗಳೆಲ್ಲ ಒಣಗಿದ್ದು, ಮಳೆಯ ಸುಳಿವಿಲ್ಲ. ಮುಂದಿನ ದಿನಗಳು ಚಿಂತಾಜನಕವಾಗಿದ್ದು, ವಿದ್ಯಾರ್ಥಿಗಳಿಗಾದರೂ ನೀರು ಸಿಗುತ್ತದೆಂಬುದು ಸಂತಸದ ಸಂಗತಿ ಎಂದರು.

ಮುಖ್ಯ ಶಿಕ್ಷಕ ಪುಟ್ಟಪ್ಪ, ಚಿಕ್ಕಮಗಳೂರು ಲಯನ್ಸ್‌ಕ್ಲಬ್‌ ಕಾರ್ಯದರ್ಶಿ ಮನೋಜ್‌, ಖಜಾಂಚಿ ಜಯರಾಮೇಗೌಡ, ಲಯನೆಸ್‌ ಅಧ್ಯಕ್ಷೆ ಲಕ್ಷ್ಮೀನಂಜಯ್ಯ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 591 ಅಂಕ ಪಡೆದು ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಇದೇ ಶಾಲೆ ವಿದ್ಯಾರ್ಥಿನಿ ಎಂ.ಕೆ.ಚೈತ್ರಾಗೆ 6,500 ರೂ. ಬಹುಮಾನದೊಂದಿಗೆ ಗೌರವಿಸಲಾಯಿತು. ಹರೀಶ್‌, ಅನಿಲ್ ಮತ್ತು ದೀಪ್ತಿ ದಂಪತಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕರಾದ ಕೆ.ಬಿ.ಚಂದ್ರಪ್ಪ, ಪಿ.ಎಸ್‌.ಶ್ರೀನಿವಾಸ, ಎಸ್‌ಡಿಎಂಸಿ ಉಪಾಧ್ಯಕ್ಷ ಧರ್ಮೇಗೌಡ, ಲಯನ್ಸ್‌ ಮಾಜಿ ಅಧ್ಯಕ್ಷರಾದ ಕೆ.ಡಿ.ಪುಟ್ಟಣ್ಣ, ಮಂಜುನಾಥಗೌಡ, ದೈಹಿಕ ಶಿಕ್ಷಕ ಸೋಮಶೇಖರ್‌, ಪರಮೇಶ್ವರಪ್ಪ ಇನ್ನಿತರರಿದ್ದರು.

ಯುದ್ಧ ಕಾಲ-ಗಡಿಭಾಗದಲ್ಲಿ ಯೋಧರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆ ಇಂತಹ ಯಂತ್ರಗಳನ್ನು ಆವಿಷ್ಕಾರಗೊಳಿಸಿದೆ. ಮಳೆಯ ಅಭಾವದಿಂದ ಕುಡಿಯುವ ನೀರಿಗೆ ಹಾಹಾಕಾರವಿರುವ ಸಂದರ್ಭದಲ್ಲಿ ಇಂತಹ ಯಂತ್ರಗಳು ಸ್ವಲ್ಪಮಟ್ಟಿನ ತೊಂದರೆಯನ್ನು ನೀಗಿಸುತ್ತವೆ.
ಬಿ.ಅನಿಲಕುಮಾರ್‌,
ಲಯನ್ಸ್‌ಕ್ಲಬ್‌ ವಲಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next