ಚಿಕ್ಕಮಗಳೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ನಾಗರಿಕರ ಸಲಹೆ- ಸೂಚನೆ ಪಡೆದಿದ್ದು, ಉದ್ದೇಶಿತ ಕಾರ್ಯಯೋಜನೆ ಅನುಷ್ಠಾನಗೊಳಿಸಲು ಆಯಾ ಇಲಾಖೆಗೆ ಡಿಪಿಆರ್ ತಯಾರಿಸಲು ಸೂಚನೆ ನೀಡಲಾಗುವುದು ಎಂದು ಕನ್ನಡ- ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಜನ್ -2013’ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಸಾರ್ವಜನಿಕರ ಸಲಹೆ- ಸೂಚನಾ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿದ್ದು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಿದೆ. ಕೇಂದ್ರ ಸರಕಾರ ದೇಶದಲ್ಲಿ 75 ಮೆಡಿಕಲ್ ಕಾಲೇಜು ಮಂಜೂರು ಮಾಡುತ್ತಿದ್ದು, ಚಿಕ್ಕಮಗಳೂರಿಗೆ ಮೊದಲ ಆದ್ಯತೆಯಲ್ಲಿ ನೀಡುವ ಭರವಸೆ ದೊರೆತಿದೆ. ಒಟ್ಟು 680 ಕೋಟಿ ರೂ. ವೆಚ್ಚದ ಕಾಲೇಜಿಗೆ ಕೇಂದ್ರ ಶೇ.60ರಷ್ಟು ಹಾಗೂ ರಾಜ್ಯ ಸರಕಾರ ಶೇ.40 ರಷ್ಟು ಅನುದಾನ ನೀಡಬೇಕು. ಅದಕ್ಕೆ ಪೂರ್ವ ಸಿದ್ಧತೆಯಾಗಿ ಕದ್ರಿಮಿದ್ರಿಯಲ್ಲಿ 30 ಎಕರೆ ಜಾಗ ಗುರುತಿಸಲಾಗಿದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಮುಂದಿನ ವಾರ ಅಧಿಕಾರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ ಜಿಲ್ಲೆಯಲ್ಲಿ 30 ಸಾವಿರ ಕಾರ್ಮಿಕರಿರಬೇಕು. ಸದ್ಯ 6 ಸಾವಿರ ಮಾತ್ರ ನೋಂದಣಿ ಆಗಿರುವುದರಿಂದ ನೋಂದಣಿ ಹೆಚ್ಚಿಸಲು ಗ್ರಾಪಂ ಮಟ್ಟದ ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ. ಕಿರು ವಿಮಾನ ನಿಲ್ದಾಣ ಸ್ಥಾಪನೆಗೆ ಈಗಿರುವ 100 ಎಕರೆ ಜಾಗ ಸಾಲದು. ಇನ್ನು 30 ಎಕರೆ ಬೇಕು. ಅದಕ್ಕಾಗಿ ಅಗತ್ಯ ಭೂಮಿಯನ್ನು ಖಾಸಗಿಯವರಿಂದ ಖರೀದಿಸಬೇಕೆಂಬ ಸೂಚನೆ ಇದೆ. ಈಗಾಗಲೇ ಇದಕ್ಕಾಗಿ ಡಿಸಿ ಖಾತೆಗೆ 7 ಕೋಟಿ ರೂ. ಬಂದಿದೆ ಎಂದು ತಿಳಿಸಿದರು.
ನೈಸರ್ಗಿಕ ಅರಣ್ಯ ಬಿಟ್ಟು ಉಳಿದ ಸಾಮಾಜಿಕ ಮತ್ತು ಡೀಮ್ಡ್ ಅರಣ್ಯ ಪ್ರದೇಶವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಕಡೂರು, ತರೀಕೆರೆ ತಾಲೂಕು ಮತ್ತು ಚಿಕ್ಕಮಗಳೂರಿನ ಕೆಲ ಭಾಗದ ಕೆರೆಗಳಿಗೆ ಗೋಂದಿ ಅಣೆಕಟ್ಟೆಯಿಂದ ನೀರು ಹರಿಸುವ ಯೋಜನೆಗೆ ಡಿಪಿಆರ್ ಆಗಿದೆ. ವಿಶ್ವೇಶ್ವರಯ್ಯ ಜಲ ನಿಗಮದ ಅನುಮತಿ ನಂತರ ಸಚಿವ ಸಂಪುಟದ ಒಪ್ಪಿಗೆ ದೊರೆಯಲಿದೆ. ಜಲಧಾರೆ ಯೋಜನೆ ವ್ಯಾಪ್ತಿಗೆ ತರೀಕೆರೆಯ 160 ಗ್ರಾಮ, ಕಡೂರಿನ 450, ಚಿಕ್ಕಮಗಳೂರಿನ 75 ಗ್ರಾಮಗಳನ್ನು ಸೇರ್ಪಡಿಸಿ, 610 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಿದ್ದು, ಸಂಪುಟದ ಮುಂದೆ ಇಡಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಚತುಷ್ಪಥ ಯೋಜನೆಗೆ ಕಡೂರಿನಿಂದ ಸೆರಾಯಿ ಹೊಟೇಲ್ ವರೆಗೆ ಮಂಜೂರಾತಿ ದೊರೆತಿದ್ದು, ಭೂಸ್ವಾಧಿಧೀನದ ನಂತರ ಮೂಡಿಗೆರೆ ವರೆಗೆ ಉಳಿದ ಕಾಮಗಾರಿ ಮುಂದುವರಿಯಲಿದೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಅಂಬಳೆಯಲ್ಲಿ ಜಾಗ ಗುರುತಿಸಲಾಗಿದೆ. 50 ಗ್ರಾಮಗಳಲ್ಲಿ 615 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು ಒಪ್ಪಿಗೆ ದೊರೆತಿದ್ದು, 3.7ವರ್ಷ ನಮ್ಮ ಸರಕಾರದ ಅವಧಿಯಲ್ಲಿ ಶಕ್ತಿ ಮೀರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕೋದ್ಯಮಿ ಡಿ.ಎಚ್.ನಟರಾಜ್ ಮಾತನಾಡಿ, ಏರ್ ಸ್ಟ್ರಿಫ್ ಮಾಡುವ ಜತೆಗೆ ಅಲ್ಲಿ ತರಬೇತಿ ಶಾಲೆ ತೆರೆಯಬೇಕು. ಜಿಲ್ಲೆಯ ನಿರುದ್ಯೋಗಿಗಳಿಗೆ ವೃತ್ತಿಯಾಧಾರಿತ ತರಬೇತಿ ನೀಡುವುದು, ಏರ್ ಜಂಬೂರಿ ಮಾಡಿದರೆ ಪ್ರವಾಸಿಗರನ್ನು ಆಕರ್ಷಿಸಬಹುದು. ವಿಯೆಟ್ನಾಂನಿಂದ ಆಮದಾಗುತ್ತಿರುವ ಕಾಳು ಮೆಣಸನ್ನು ತಡೆದು ಜಿಲ್ಲೆಯ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕೆಂದರು.
ಬಿಎಸ್ಪಿ ಮುಖಂಡ ರಾಧಾಕೃಷ್ಣ ಮಾತನಾಡಿ, ನಗರದ ರಾಜಕಾಲುವೆ ಮೇಲೆ ನಿರ್ಮಿಸಿರುವ ಕಟ್ಟಡ ತೆರವು ಮಾಡಬೇಕೆಂದರು. ಪತ್ರಕರ್ತ ಸ.ಗಿರಿಜಾ ಶಂಕರ್ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಾಗ ವಲಯ ವಿಂಗಡಣೆ ಅಗತ್ಯ. ಬಸವನಹಳ್ಳಿ ಕೆರೆ ಮಧ್ಯದಲ್ಲಿ ಮಾರಮ್ಮನ ಗೊಂಬೆಯಂತಿರುವ ವಿವೇಕಾನಂದರ ಪ್ರತಿಮೆಯನ್ನು ಮೊದಲು ತೆಗೆಸಬೇಕೆಂದರು. ಡಾ| ರಾಜ್ ಅಭಿಮಾನಿಗಳ ಸಂಘದ ಕುಮಾರ್, ಪರಿಸರವಾದಿ ವೀರೇಶ್ ಮಾತನಾಡಿದರು.
ಎಡಿಸಿ ಡಾ.ಕುಮಾರ್, ಉಪ ಕಾರ್ಯದರ್ಶಿ ರಾಜ್ ಗೋಪಾಲ್, ಜಿಪಂ ಉಪಾಧ್ಯಕ್ಷ ವಿಜಯ್‌ಕುಮಾರ್ ಇತರರು ಹಾಜರಿದ್ದರು.