Advertisement

ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ

11:33 AM Aug 18, 2019 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿವೃಷ್ಟಿ, ನೆರೆ ಹಾವಳಿ ಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಏಕಗವಾಕ್ಷಿ ಯೋಜನೆಯಡಿ ಶೀಘ್ರ ಪರಿಹಾರ ವಿತರಿಸುವಂತೆ ಶಾಸಕ ಸಿ.ಟಿ.ರವಿ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.

Advertisement

ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು, ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯ ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರ ಸೇರಿದಂತೆ ಜನರ ರಕ್ಷಣೆಗೆ ಶಕ್ತಿ ಮೀರಿ ಕ್ರಮ ವಹಿಸಿದ್ದೀರಿ. ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದೀರಿ. ಅದಕ್ಕಾಗಿ, ಜಿಲ್ಲಾಡಳಿತವನ್ನು ಹಾಗೂ ಮಾನವೀಯ ನೆಲಗಟ್ಟಿನಲ್ಲಿ ಸಹಕರಿಸಿದ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಮಲೆನಾಡಿನ ಪ್ರದೇಶಗಳಲ್ಲಿ ಅತಿವೃಷ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಪದೇ ಪದೆ ಭೂ ಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳಬೇಕಾಗಿದೆ. ಪ್ರಯುಕ್ತ ವೈಜ್ಞಾನಿಕ ಕಾರಣಗಳನ್ನು ಕಂಡಹಿಡಿಯಲು ಸೂಕ್ತ ಅಧಿಕಾರಿಗಳ ತಂಡವನ್ನು ರಚನೆ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ನೆರೆ ಹಾವಳಿಯಿಂದ ದೊಡ್ಡ ಪ್ರಮಾಣದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿಗಳು ಹಾನಿಗೊಳಗಾಗಿವೆ. ಇದನ್ನು ನಿಖರವಾಗಿ ಸಮೀಕ್ಷೆ ನಡೆಸಿ ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.

ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತೊಂದರೆಗೆ ಒಳಗಾದ ಪ್ರದೇಶವನ್ನು ಗುರುತಿಸಿ, ಅಲ್ಲಿನ ಸ್ಥಳೀಯರನ್ನು ಶಾಶ್ವತವಾಗಿ ಸ್ಥಳಾಂತರ ಮಾಡಬೇಕಾಗಿದೆ. ಅಲ್ಲದೇ, ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಜಾಗದ ವ್ಯವಸ್ಥೆ ಕಲ್ಪಿಸಲು ಜಾಗ ಗುರುತು ಮಾಡಿ ಇಲ್ಲಿ ಮೂಲಭೂತ ಸೌಕರ್ಯ ಹಾಗೂ ಪರಿಹಾರ ಒದಗಿಸಬೇಕೆಂದು ತಿಳಿಸಿದ್ದಾರೆ.

ಸಂತ್ರಸ್ತರು ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಸುತ್ತಾಡದಂತೆ ಕ್ರಮ ವಹಿಸಬೇಕು. ಸಿಂಗಲ್ ವಿಂಡೋ ಸಿಸ್ಟಮ್‌ನಲ್ಲಿ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಪ್ರತಿ ಗ್ರಾಮ, ಪ್ರತಿ ಕುಟುಂಬವನ್ನು ಸಮೀಕ್ಷೆ ನಡೆಸಿ ಪರಿಹಾರ ನೀಡಲು, ಸಂತ್ರಸ್ತ ಪ್ರದೇಶಗಳಲ್ಲಿ ಪ್ರತಿ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಗಳ ತಂಡಗಳನ್ನು ರಚನೆ ಮಾಡಬೇಕು. ಪ್ರತಿ ಗ್ರಾಪಂಗೆ ಒಬ್ಬರಂತೆ ನೋಡೆಲ್ ಅಧಿಕಾರಿ ನೇಮಿಸಿ ಆ ಮೂಲಕ ಸಮಗ್ರ ವರದಿ ತಯಾರು ಮಾಡಿ ಸಂತ್ರಸ್ತರಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.

Advertisement

ನೆರೆ ಹಾವಳಿಯಿಂದ ರೈತರು ಬೆಳೆದ ಭತ್ತ, ಬಾಳೆ, ಕಾಫಿ, ಮೆಣಸು, ಅಡಕೆ ಹಾಗೂ ಇತರೆ ಬೆಳೆಗಳು ನಾಶವಾಗಿವೆ. ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಜಾನುವಾರುಗಳು ಕಣ್ಮರೆಯಾಗಿದ್ದು, ಪರಿಹಾರ ನೀಡಬೇಕಾಗಿದೆ. ಪ್ರಯುಕ್ತ ಪಶು ಸಂಗೋಪನಾ ಇಲಾಖೆಯಿಂದ ಅತಿವೃಷ್ಟಿ ಉಂಟಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಿಕೊಡಬೇಕಾಗಿದೆ.
ಸಿ.ಟಿ.ರವಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next