Advertisement

ಪತ್ರಕರ್ತರಿಗೆ ಪ್ರಾಮಾಣಿಕತೆ ಮುಖ್ಯ: ಕುಮಾರ

03:13 PM Jul 29, 2019 | Naveen |

ಚಿಕ್ಕಮಗಳೂರು: ಪತ್ರಕರ್ತನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯಕ್ಕಿಂತ ಅಂತರಂಗದ ಸ್ವಾತಂತ್ರ್ಯ ಬಹುಮುಖ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಕುಮಾರ್‌ ತಿಳಿಸಿದರು.

Advertisement

ನಗರದ ಚಿಕ್ಕಮಗಳೂರು ಪ್ರಸ್‌ಕ್ಲಬ್‌ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕಾ ರಂಗವು ಸಂವಿಧಾನದ ನಾಲ್ಕನೇ ಸ್ಥಂಭವಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಕರ್ತನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯವಿದೆ. ಇದಕ್ಕಿಂತಲೂ ಮುಖ್ಯವಾಗಿ ಪತ್ರಕರ್ತನಲ್ಲಿ ಇರಬೇಕಾದದ್ದು ಅಂತರಂಗದ ಸ್ವಾತಂತ್ರ್ಯ. ಪತ್ರಕರ್ತ ಮತ್ತೂಬ್ಬರ ಮುಲಾಜಿಗೆ ಬಲಿಯಾದರೆ ಆತ ಪತ್ರಿಕಾರಂಗಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗ ಸಾಮಾಜಿಕ ಋಣಕ್ಕೆ ಒಳಗಾಗಿದೆ. ಸಾಮಾಜಿಕ ಋಣ ತೀರಿಸಬೇಕಾದರೆ ಸ್ವಸ್ಥ ಸಮಾಜ ಕಟ್ಟಲು ಬದ್ಧವಾಗಿರಬೇಕು. ಆಧುನಿಕ ತಂತ್ರಜ್ಞಾನದ ನಾಗಾಲೋಟದಲ್ಲಿ ಮುದ್ರಣ ಮಾಧ್ಯಮ ಪ್ರಾಮುಖ್ಯತೆ ಕಡಿಮೆ ಆಗುತ್ತಿದೆ ಎಂದು ಅನಿಸಿದರು ಕೂಡ ಅದರದೆ ಆದ ಓದುಗರು ಇದ್ದಾರೆ. ಆ ಒದುಗ ಏನು ಬಯಸುತ್ತಾನೋ ಅದನ್ನು ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಪತ್ರಕರ್ತ ಮಾಡಬೇಕು ಎಂದರು.

ವಲಯ ಅರಣ್ಯಾಧಿಕಾರಿ ಶಿಲ್ಪಾ ಮಾತನಾಡಿ, ಸಮಾಜದ ಋಣ ತೀರಿಸಲು ಉನ್ನತ ಸ್ಥಾನದ ಕನಸು ಕಾಣುವ ಯುವ ಜನತೆಗೆ ಪತ್ರಿಕೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಪತ್ರಿಕೆಗಳು ಸಹಕಾರಿಯಾಗಿದೆ ಎಂದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಸ್‌ಕ್ಲಬ್‌ ಅಧ್ಯಕ್ಷ ಆರಗ ರವಿ ಮಾತನಾಡಿ, ಪತ್ರಿಕಾರಂಗದಲ್ಲಿ ಕೆಲಸ ನಿರ್ವಹಿಸುವವರು ಯಾವಾಗಲೂ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಪತ್ರಕರ್ತ ಸುದ್ದಿ ಸಂಪಾದನೆಯತ್ತಲೇ ಯಾವಾಗಲೂ ಗಮನಹರಿಸಿರುತ್ತಾನೆ. ಆತನ ಸಮಸ್ಯೆ, ಮುಂದಿನ ಹೆಜ್ಜೆಯ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಪ್ರಸ್‌ಕ್ಲಬ್‌ ನಿಕಟಪೂರ್ವ ಅಧ್ಯಕ್ಷ ದಿನೇಶ್‌ ಪಟವರ್ಧನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್‌ ಕ್ಲಬ್‌ ಉಪಾಧ್ಯಕ್ಷ ಎಸ್‌.ಕೆ.ಲಕ್ಷ್ಮೀಪ್ರಸಾದ್‌, ಪ್ರಧಾನ ಕಾರ್ಯದರ್ಶಿ ಹಿರೇಗೌಜ ಶಿವಕುಮಾರ್‌ ಉಪಸ್ಥಿತರಿದ್ದರು. ಪತ್ರಿಕಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪ್ರಸ್‌ಕ್ಲಬ್‌ ನಿರ್ದೇಶಕ ಬಿ.ಎಂ.ರವಿ ನಿರೂಪಿಸಿದರು. ಖಜಾಂಚಿ ಕಿಶೋರ್‌ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next