Advertisement

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ ಕ್ರಮ

11:40 AM Dec 30, 2019 | Team Udayavani |

ಚಿಕ್ಕಮಗಳೂರು: ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆ ವತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ನಗರ ವ್ಯಾಪ್ತಿಯಲ್ಲಿದ್ದ 5-6 ನೈಟ್‌ ಬೀಟ್‌ (ರಾತ್ರಿ ಗಸ್ತು) ವ್ಯವಸ್ಥೆಯನ್ನು 15ಕ್ಕೆ ಏರಿಸಲಾಗಿದೆ ಎಂದು ಹೇಳಿದರು.

ಇಲಾಖೆಯ ಉಪವಿಭಾಗಗಳಲ್ಲೂ ಇದನ್ನು ಜಾರಿ ಮಾಡಲಾಗುತ್ತಿದ್ದು, ಪ್ರತೀ ಪೊಲೀಸ್‌ ಪೇದೆ, ಅಧಿಕಾರಿಗಳು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ನೈಟ್‌ ಬೀಟ್‌ ಮಾಡಲೇಬೇಕಾದ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್‌ ಇಲಾಖೆ ಅಳವಡಿಸಿಕೊಂಡಿದೆ. ಈ ವ್ಯವಸ್ಥೆ ಹೊಸ ವರ್ಷಾಚರಣೆ ನಂತರವೂ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಮಹಿಳಾ ಪೊಲೀಸ್‌ ಸಿಬ್ಬಂದಿ ಹಾಗೂ ಆರೋಗ್ಯ ಸಮಸ್ಯೆಗಳಿರುವ
ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದ ಎಲ್ಲ ಅಧಿಕಾರಿ, ಸಿಬ್ಬಂದಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲೇಬೇಕು. ನಗರ ವ್ಯಾಪ್ತಿ ಯಲ್ಲಿ ಈ ಹಿಂದೆ ರಾತ್ರಿ ವೇಳೆ ಚೆಕ್‌ ಪೋಸ್ಟ್‌ಗಳು ಕಾರ್ಯನಿರ್ವಹಿ ಸುತ್ತಿರಲಿಲ್ಲ. ಈ ಹೊಸ ನೈಟ್‌ ಬೀಟ್‌ ವ್ಯವಸ್ಥೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಎರಡು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಚೆಕ್‌ ಪೋಸ್ಟ್‌ಗಳು ರಾತ್ರಿ ವೇಳೆ ಕಾರ್ಯನಿರ್ವಹಿಸುತ್ತಿದ್ದು, ಇವು ನಿರ್ದಿಷ್ಟ ಸ್ಥಳದಲ್ಲೇ ಕಾರ್ಯನಿರ್ವಹಿಸದೆ ಆಗಾಗ್ಗೆ ಸ್ಥಳ ಬದಲಾಯಿಸುತ್ತ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

ನೈಟ್‌ಬೀಟ್‌ ಚೆಕ್‌ಪೋಸ್ಟ್ ಗಳು ಕೇವಲ ಸಂಚಾರ ನಿಯಂತ್ರಣದ ಉದ್ದೇಶದಿಂದ ಕಾರ್ಯನಿರ್ವಹಿಸುವುದಿಲ್ಲ. ಶಂಕಾಸ್ಪದ ವಾಹನಗಳ ತಪಾಸಣೆ, ಅನುಮಾನಾಸ್ಪದ ವ್ಯಕ್ತಿಗಳ ತಪಾಸಣಾ ಕಾರ್ಯವನ್ನು ಮಾಡಲಿವೆ. ಹೊಸ ವರ್ಷದ ಸಂದರ್ಭದಲ್ಲಿ ಮದ್ಯಪಾನ ಮಾಡಿ ವಾಹನ ಓಡಿಸುವ ಚಾಲಕರ ತಪಾಸಣೆಗಾಗಿ ನೈಟ್‌ಬೀಟ್‌ನ ಎಲ್ಲ ಸಿಬ್ಬಂದಿಗೆ ಆಲ್ಕೊಹಾಲಿಕ್‌ ಬ್ರಿàಥ್‌ ಅನಲೈಸರ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ವಾಹನಗಳನ್ನು ನಿಲ್ಲಿಸದೆ ಅತೀ ವೇಗದಲ್ಲಿ ಸಂಚರಿಸುವ ವಾಹನಗಳ ಭಾವಚಿತ್ರ, ವಿಡಿಯೋ ಚಿತ್ರೀಕರಣಕ್ಕಾಗಿ ಎಲ್ಲ ಸಿಬ್ಬಂದಿಗೆ ಕ್ಯಾಮರಾಗಳನ್ನೂ ಒದಗಿಸಲಾಗಿದೆ. ಇದಲ್ಲದೇ ಹೊಸ ವರ್ಷಾಚರಣೆ ಸಡಗರದಲ್ಲಿ
ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವ ವಾಹನಗಳನ್ನು ನಗರದ ವಿವಿಧೆಡೆ ಇರುವ 60 ಸಿಸಿ ಕ್ಯಾಮರಾಗಳ ಮೂಲಕ ಕಂಟ್ರೋಲ್‌ ರೂಂನಲ್ಲೇ ಪರಿಶೀಲನೆ ಮಾಡಲಾಗುತ್ತದೆ ಎಂದರು.

Advertisement

ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಇರುವ ಹೋಂಸ್ಟೇಗಳಿಗೆ ಧ್ವನಿ ವರ್ಧಕಗಳ ಬಳಕೆಗೆ ಅನುಮತಿ ನೀಡಿಲ್ಲ. ಮದ್ಯ ಸರಬರಾಜು ಮಾಡಲೂ ಅವಕಾಶವಿಲ್ಲ. ರೆಸಾರ್ಟ್‌ ಗಳಲ್ಲಿ ಧ್ವನಿವರ್ಧಕಗಳ ಬಳಕೆ ಪರವಾನಗಿ ಅತ್ಯಗತ್ಯ ಎಂದ ಅವರು, ಈ ಸಂಬಂಧ ಹೋಂ ಸ್ಟೇಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದೆಂದರು.

ಅಧಿಕೃತ ಕ್ಲಬ್‌ಗಳಲ್ಲಿ ಪ್ರತೀ ವರ್ಷ ಧ್ವನಿವರ್ಧಕಗಳ ಬಳಕೆಗೆ ಷರತ್ತು ಬದ್ಧವಾಗಿ ಅನುಮತಿ ನೀಡಲಾಗುತ್ತಿದ್ದು, ಈ ಬಾರಿಯೂ ಅದರಂತೆಯೇ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಲಾಗಿದೆ. ಹೊಸ ಕ್ಲಬ್‌ ಗಳಿಗೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.

ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಬಂದೋಬಸ್ತ್ಗೆ ಹೆಚ್ಚು ನಿಗಾ ವಹಿಸಲಾಗಿದೆ. ಡಿ.29ರಿಂದ ಸಂಚಾರಿ ಪೊಲೀಸರನ್ನೂ ಮೂರು ದಿನಗಳ ಕಾಲ ನೈಟ್‌ಬೀಟ್‌ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಈ ವೇಳೆ
ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಲಾಗುತ್ತದೆ. ಕಟ್ಟುನಿಟ್ಟಿನ ನೈಟ್‌ಬೀಟ್‌ ವ್ಯವಸ್ಥೆಯಿಂದಾಗಿ ಸಾಕಷ್ಟು ಸುಧಾರಣೆಗಳು ಕಂಡು ಬಂದಿವೆ. ಇತ್ತೀಚೆಗೆ ನಗರ ವ್ಯಾಪ್ತಿಯಲ್ಲಿ ಒಡವೆ ಅಂಗಡಿಯೊಂದರ ಕಳ್ಳತನ ಪ್ರಕರಣವನ್ನೂ ನೈಟ್‌ಬೀಟ್‌ ಪೊಲೀಸರು ವಿಫಲಗೊಳಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಪ್ರತಿದಿನ ಮದ್ಯಪಾನ ಮಾಡಿ ವಾಹನ ಚಲಾಯಿಸುವ 10 ರಿಂದ 12
ಪ್ರಕರಣಗಳು ದಾಖಲಾಗುತ್ತಿವೆ. ಹೊಸ ವರ್ಷಾಚರಣೆ ವೇಳೆ ಈ ಪ್ರಕರಣಗಳ ಸಂಖ್ಯೆ ಹೆಚ್ಚಲಿದ್ದು, ಈ ಕಾರಣಕ್ಕೆ ನೈಟ್‌ಬೀಟ್‌ನ ಎಲ್ಲ ಸಿಬ್ಬಂದಿಗೂ ಮದ್ಯಪಾನ ತಪಾಸಣಾ ಸಾಧನಗಳನ್ನು ನೀಡಲಾಗಿದೆ.
ಹರೀಶ್‌ ಪಾಂಡೆ, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next