Advertisement

ಮಕ್ಕಳ ಪ್ರತಿಭೆ ಅನಾವರಣಗೊಳಿಸಿ

03:27 PM Dec 25, 2019 | Team Udayavani |

ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿ ಅವರನ್ನು ಉತ್ತೇಜಿಸುವುದು ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜನೆಯ ಪ್ರಮುಖ ಆಶಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ನಗರ ಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕಚೇರಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಹಿರೇಮಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಪ್ರತಿಭೆ ಮತ್ತು ಕಲಾಸಕ್ತಿಯನ್ನು ಹೊರಹಾಕಲು ಅವಕಾಶ ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಇಮ್ಮಡಿಯಾಗಿ ಸಾಧನೆ ಮಾಡುತ್ತಾರೆ. ಪರೀಕ್ಷೆ ಮತ್ತು ಅಂಕಕ್ಕಾಗಿ ಮಾತ್ರ ಅಧ್ಯಯನ ಸೀಮಿತವಾಗಿದ್ದು, ವಿದ್ಯಾರ್ಥಿಗಳು ಆ ಮಿತಿಯನ್ನು ದಾಟಿ ಜ್ಞಾನಕ್ಕಾಗಿ ಓದು ಎಂಬ ನಿಟ್ಟಿನಲ್ಲಿ ಬೆಳೆಯಬೇಕು ಎಂದು ಹೇಳಿದರು.

ಶೈಕ್ಷಣಿಕವಾಗಿ ಏಕರೂಪದ ಶಿಕ್ಷಣ ನೀಡಿದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕಾಗಿ ಒಂದೇ ಕಡೆ ವೇದಿಕೆ ನಿರ್ಮಿಸಲು ಸಾಧ್ಯವಿಲ್ಲ. ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕಿಂತ ಆಂಗ್ಲ ಮಾಧ್ಯಮದ ವ್ಯಾಸಂಗವೇ ಶ್ರೇಷ್ಠ ಎಂಬ ಭ್ರಮಾ ಲೋಕದಿಂದ ಪೋಷಕರು ಮತ್ತು ಮಕ್ಕಳು ಹೊರಬಂದು ನಮ್ಮತನವನ್ನು ಕಾಪಾಡಿಕೊಳ್ಳಬೇಕೆಂದರು.

ವಿಧಾನ ಪರಿಷತ್‌ ಶಾಸಕ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಇಂದು ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಎಡುವುತ್ತಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು
ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.

Advertisement

ಶಿಕ್ಷಣ ಮಕ್ಕಳ ವಿದ್ಯಾರ್ಜನೆಗೆ ಮಾತ್ರ ಸೀಮಿತವಾಗಿರದೆ ಅವರಲ್ಲಿನ ಪ್ರತಿಭೆ ಹೊರಹಾಕಿ ವಿಕಾಸ ಹೊಂದಲು ಸಹಾಯ ಮಾಡುವುದು ಶಿಕ್ಷಣದ ಮಹತ್ತರ ಕಾರ್ಯವೆಂದು ತಿಳಿಸಿದರು.

ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂಬ ನುಡಿಯಂತೆ, ಶಿಕ್ಷಣದ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದರೆ ಮಾತ್ರ ಜ್ಞಾನಾಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಸಂವಿಧಾನದತ್ತವಾಗಿ ಪ್ರತಿ ಮಗುವೂ ಶಿಕ್ಷಣ ಹೊಂದುವ ಹಕ್ಕನ್ನು ಹೊಂದಿದ್ದು, ಪ್ರತಿ ಮಗುವಿಗೆ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡುತ್ತಿದೆ. ಪೋಷಕರು ಸರ್ಕಾರದ ಜೊತೆ ಕೈಜೋಡಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದಾಗ ಸರ್ಕಾರದ ಪ್ರಯತ್ನ ಕೈಗೂಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಜಿ.ಎಲ್‌.ವಿಜಯ್‌ಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ಕುಮಾರ್‌, ಹಿರಿಗಯ್ಯ, ತಾಲೂಕು ಪಂಚಾಯತ್‌ ಸದಸ್ಯರಾದ ದೀಪಾ ನಾಗೇಶ್‌, ರೇಖಾ ಅನಿಲ್‌, ದ್ರಾಕ್ಷಾಯಿಣಿ ಪೂರ್ಣೇಶ್‌, ಕೇತ್ರ ಶಿಕ್ಷಣಾಧಿಕಾರಿ ಎಸ್‌.ಆರ್‌.ಮಂಜುನಾಥ್‌, ಎಸ್‌ಡಿಎಂಸಿ ಅಧ್ಯಕ್ಷೆ ರೂಪಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ಈ.ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next