Advertisement

ಆರೋಗ್ಯವಂತ ಮಹಿಳೆ ಸಮಾಜದ ಶಕ್ತಿ:ವಿದ್ಯಾಸಾಗರ್‌

03:59 PM Oct 06, 2019 | Naveen |

ಚಿಕ್ಕಮಗಳೂರು: ಮಹಿಳೆ ಇಲ್ಲದ ಮನೆಯಲ್ಲಿ ಅಯೋಮಯ ವಾತಾವರಣ ಇರುವ ಹಾಗೆ, ಆರೋಗ್ಯವಂತ ಮಹಿಳೆ ಇಲ್ಲದ ಸಮಾಜವೂ ಅಸ್ತವ್ಯಸ್ತವಾಗುತ್ತದೆ. ಹಾಗಾಗಿ, ಆರೋಗ್ಯವಂತ ಮಹಿಳೆ ಸಮಾಜದ ಶಕ್ತಿ ಎಂದು ಡಾ| ವಿದ್ಯಾಸಾಗರ್‌ ಹೇಳಿದರು.

Advertisement

ತಾಲೂಕಿನ ಮಳಲೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಕೆ.ಆರ್‌.ಪೇಟೆ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ, ಪೋಷಣ್‌ ಅಭಿಯಾನ ಹಾಗೂ ಮಾತೃ ವಂದನಾ, ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳೆಯಿಂದ ಮಕ್ಕಳು ಮಕ್ಕಳಿಂದ ದೇಶ, ತಾಯಿ ಯಾವರೀತಿ ನಡೆದುಕೊಳ್ಳುತ್ತಾಳ್ಳೋ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ, ತಾಯಿ ಆರೋಗ್ಯವಂತಳಾಗಿದ್ದರೆ ಮಕ್ಕಳು ಕೂಡ ಆರೋಗ್ಯವಂತರಾಗುತ್ತಾರೆ ಎಂದರು.

ಹಿಂದೆ ಆಸ್ಪತ್ರೆಗಳು ಹಾಗೂ ರೋಗಗಳು ಇಷ್ಟರ ಮಟ್ಟಿಗೆ ಇರಲಿಲ್ಲ ಎಂಬುದು ಎರಡು ತಲೆಮಾರಿನ ಹಿರಿಯರನ್ನು ನೋಡಿದರೆ ತಿಳಿಯುತ್ತದೆ. ಅವರು ಬಹಳ ಧೀರ್ಘಾವಧಿ ಜೀವನ ನಡೆಸುತ್ತಾ, ಸಮಾಜಮುಖೀಯಾಗಿ ತಮ್ಮ ಕುಟುಂಬವನ್ನು ಸಮತೋಲನವಾಗಿ ಕೊಂಡೊಯ್ಯುತ್ತಿದ್ದರು. ಅದಕ್ಕೆ ಕಾರಣ ಪೌಷ್ಟಿಕ ಆಹಾರ ಸೇವನೆ. ಈಗ ಎಲ್ಲಾ ಆಹಾರ ಕಲಬೆರಕೆಯಾಗಿರುತ್ತಿದೆ. ನಾವು ಸತ್ವಯುತ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋಸಂಬರಿಯಲ್ಲಿರುವ ಉಪ್ಪಿನಲ್ಲಿ ಸೋಡಿಯಂ ಇರುತ್ತದೆ. ಕೊತ್ತಂಬರಿ ಸೊಪ್ಪು ಮತ್ತು ಸೌತೆಕಾಯಿ ವಿಶೇಷವಾದುದು. ಈ ಹಸಿರು ಬಣ್ಣದಲ್ಲಿ ಮ್ಯಾಗ್ನೇಷಿಯಂ ಎಂಬ ಲವಣಾಂಶವಿರುತ್ತದೆ. ಅದು ನಮ್ಮ ದೇಹದಲ್ಲಿದ್ದರೆ ಶಕ್ತಿ ಉತ್ಪಾದನೆಯಾಗಿ ದೇಹವನ್ನು ರೀಚಾರ್ಚ್‌ ಮಾಡುತ್ತದೆ. ಹಾಗಾಗಿ, ಲವಣಾಂಶವಿಲ್ಲದಿದ್ದರೆ ಚಾರ್ಜ್‌ ಇಲ್ಲದ ಸೆಲ್‌ಫೋನ್‌ ರೀತಿ ಠುಸ್‌ ಆಗುತ್ತೇವೆ ಎಂದರು.

Advertisement

ತಾಲೂಕು ಪಂಚಾಯಿತಿ ಸದಸ್ಯ ಕೆ.ಯು. ಮಹೇಶ್‌ ಮಾತನಾಡಿ, ಅಂಗನವಾಡಿ
ಕಾರ್ಯಕರ್ತರು ಒಗ್ಗೂಡಿ ಮಹಿಳಾ ಸಬಲೀಕರಣದ ಜೊತೆ ಕಿಶೋರಿಯರ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸುವ ಕಾರ್ಯ ಉತ್ತಮವಾದುದು. ಛದ್ಮವೇಷದ ಮೂಲಕ ಗ್ರಾಮೀಣ ಮಕ್ಕಳಲ್ಲಿ ಅಡಗಿರುವ ಪ್ರತಿಭೆ-ಆತ್ಮಸ್ಥೈರ್ಯ  ಹೊರಹಾಕಲು ಸಾಧ್ಯವಾಗುತ್ತದೆ. ಜನಪದ ಶೈಲಿಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಿ, ಪೌಷ್ಟಿಕ ಆಹಾರದ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಪಂಚಾಯಿ ವ್ಯಾಪ್ತಿಯಲ್ಲಿ ಮೂರು ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಅನುದಾನ ನೀಡಲಾಗಿದ್ದು, ಸಿರಿಗಾಪುರ, ಕಂಚೇನಹಳ್ಳಿ ಅಂಗನವಾಡಿ ದುರಸ್ತಿಗೆ ಸಿದ್ಧವಾಗಿವೆ. ಈ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಅಭಿವೃದ್ಧಿಗೆ ಕಾರ್ಯಕರ್ತರು ಮಾಹಿತಿ ನೀಡಿದರೆ ಸಹಕರಿಸುವುದಾಗಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆ ವಸಂತಾ ಮಾತನಾಡಿ, ಈ ಭಾಗದ ಅಂಗನವಾಡಿ ಕಾರ್ಯಕರ್ತರು ಒಗ್ಗೂಡಿ ಪೌಷ್ಟಿಕ ಆಹಾರದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರೊಂದಿಗೆ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಇದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿದೆ ಎಂದರು.

ಗ್ರಾಮದ ಗರ್ಭಿಣಿಯರಿಗೆ ಮಡಿಲಕ್ಕಿ ತುಂಬಿ, ಆರತಿ ಬೆಳಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದರು. ಕೆ.ಆರ್‌.ಪೇಟೆ ವೃತ್ತದ ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಂತರ ಗ್ರಾಮಸ್ಥರಿಗೆ ಪೌಷ್ಟಿಕ ಆಹಾರ ನೀಡಲಾಯಿತು.

ಗ್ರಾಪಂ ಸದಸ್ಯೆ ಕೃತಿಕಾ, ಮೇಲ್ವಿಚಾರಕಿಯರಾದ ಜಯಲಕ್ಷ್ಮೀ , ಪುಷ್ಪಾ, ಶಾರದಾ, ಮಂಜುಳಾ, ಭಾಗ್ಯಲಕ್ಷ್ಮೀ , ವಸಂತ, ಪಿಡಿಒ ಜಗದೀಶ್‌, ಗ್ರಾಪಂ
ಕಾರ್ಯದರ್ಶಿ ಮೈಮುನಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next