ಚಿಕ್ಕಮಗಳೂರು: ರಸ್ತೆಯಲ್ಲಿನ ಗುಂಡಿಗೆ ಸಾರ್ವಜನಿಕರು ಪೂಜೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ನ.9ರ ಶನಿವಾರ ನಡೆದಿದೆ.
ಹಲವು ದಿನಗಳಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಹಲವು ಬಾರಿ ಮನವಿ ಮಾಡಿದರೂ ನಗರಸಭೆ ಸ್ಪಂದಿಸದೆ ಇರುವುದರಿಂದ ಗ್ರಾಮದ ಜನರು ಮೂರು ದಿನದಲ್ಲಿ ಗುಂಡಿ ಮುಚ್ಚದಿದ್ರೆ ಹಾಲು ತುಪ್ಪ ಬಿಡುವ ಎಚ್ಚರಿಕೆ ನೀಡಿ ಪಲಾವ್, ವಡೆ, ನಿಂಬೆಹಣ್ಣು ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಮಾಡಿದ್ದಾರೆ.
ಮೊದಲು ಕಾಮಗಾರಿಗೆ ಗುಂಡಿ ತೆಗೆಯಲಾಗಿತ್ತು. ಆ ನಂತರ ಗುಂಡಿ ಮುಚ್ಚಿದ್ದರೂ ಮತ್ತೆ ಗುಂಡಿಯಾಗಿದ್ದ ರಸ್ತೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ರಸ್ತೆ ಗುಂಡಿಗೆ ಬ್ಯಾರಿಕೇಡ್ ಇಟ್ಟು ಪೂಜೆ ಮಾಡಿದ್ದಾರೆ.
ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯರಸ್ತೆಯಲ್ಲಿನ ಗುಂಡಿಯಿಂದ ಹಲವು ಬೈಕ್ ಗಳು ಅಪಘಾತ ಸಂಭವಿಸುತ್ತಿದ್ದು, ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸದ ಹಿನ್ನೆಲೆ ಈ ಪೂಜೆ ಮಾಡಲಾಗಿದೆ.