ಕೊಟ್ಟಿಗೆಹಾರ: ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತು ಬರಿಗಾಲಲ್ಲೇ ಏಕಾಂಗಿಯಾಗಿ ಮತಯಾಚನೆ ಮಾಡುವ ಮೂಲಕ ನಿಡುವಾಳೆ ಕ್ಷೇತ್ರದ ಚುನಾವಣಾ ಅಭ್ಯರ್ಥಿಯೊಬ್ಬರು ಗಮನ ಸೆಳೆದಿದ್ದಾರೆ.
ಅರೆಕೊಡಿಗೆ ಸಮೀಪದ ಸುಕ್ಲುಮಕ್ಕಿಯ ನವೀನ್ ಹಾವಳಿ ಅವರು ನಿಡುವಾಳೆ ಕ್ಷೇತ್ರದಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಸುವ ಮೂರು ತಿಂಗಳ ಮೊದಲೇ ಮಂಗಳೂರಿನ ದೇವಸ್ಥಾನವೊಂದರಲ್ಲಿ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತಿದ್ದಾರೆ. ಹಾಗಾಗಿ, ಬರಿಗಾಲಿನಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ.
ಚಪ್ಪಲಿ ಚಿಹ್ನೆಯನ್ನೇ ಚುನಾವಣೆಗೆ ಆರಿಸಿಕೊಂಡಿರುವ ಅವರು, ಚಿಕ್ಕ ಚಪ್ಪಲಿಯನ್ನು ತನ್ನ ಬ್ಯಾಗಿಗೆ ಹಾಕಿಕೊಂಡು ಮನೆ ಮನೆಗೆ ತೆರಳಿ ಚಪ್ಪಲಿ ಗುರುತಿಗೆ ಮತ ನೀಡುವಂತೆ ಮತಯಾಚಿಸುತ್ತಿದ್ದಾರೆ.
ಇದನ್ನೂ ಓದಿ:ವಿ.ಪರಿಷತ್ ನಲ್ಲಿ ನಡೆದ ಘಟನೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸುವಂತಾಗಿದೆ: ಕಾಗೇರಿ
ಮತಯಾಚನೆ ಮಾಡುವಾಗ ಬೆಂಬಲಿಗರನ್ನು ಕರೆದುಕೊಂಡು ಹೋಗದೆ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಮತಯಾಚಿಸಲು ಹೋದ ಪ್ರತಿ ಮನೆಯಿಂದ ಒಂದು ಹಿಡಿ ಅಕ್ಕಿಯನ್ನು ಪಡೆಯುತ್ತಿದ್ದು, ಆ ಅಕ್ಕಿಯಿಂದಲೇ ಅನ್ನ ಮಾಡಿಕೊಂಡು ಊಟ ಮಾಡುತ್ತಿದ್ದಾರೆ.