ಚಿಕ್ಕಮಗಳೂರು : ತಾಯಿಯನ್ನು ಕಳೆದುಕೊಂಡು ಕಾಡಾನೆ ಮರಿಯೊಂದು ಅನಾಥವಾಗಿರುವ ಘಟನೆ ಮೂಡಿಗೆರೆ-ಬೇಲೂರು ರಸ್ತೆಯ ಚೀಕನಹಳ್ಳಿ ಬಳಿ ನಡೆದಿದೆ.
ಈ ಮರಿ ಆನೆಯೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟುಕೊಂಡು ಅಮ್ಮನಿಗಾಗಿ ಪರಿತಪಿಸುತ್ತಿದ್ದು, ಬಾ ಅಂದರೆ ಹತ್ತಿರ ಬರುತ್ತದೆ, ಹೋಗು ಎಂದರೆ ದೂರ ಹೋಗುತ್ತದೆ. ಹೇಳಿದ ಮಾತನ್ನು ಮಕ್ಕಳಂತೆ ಕೇಳುವ ಆನೆ ಇದಾಗಿದೆ.
ಆನೆ ಮರಿ ದಿಕ್ಕುತೋಚದೆ ಕಾಫಿತೋಟದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದು, ಅರಣ್ಯ ಅಧಿಕಾರಿಗಳು ಮರಿ ಆನೆಗೆ ನೀರು ಕೊಟ್ಟು ಸಂತೈಸಿದದರು. ಮರಿ ಆನೆಯನ್ನ ಅಮ್ಮ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳು ಪರದಾಡುತ್ತಿದ್ದಾರೆ.
ಗುಂಪಿನಿಂದ ಬೇರ್ಪಟ್ಟ ಮರಿಯನ್ನು ಆನೆಗಳ ಗುಂಪು ಹತ್ತಿರ ಸೇರಿಸುವುದಿಲ್ಲ. ಆನೆಗಳ ಗುಂಪು ಮರಿಯನ್ನು ಬಿಟ್ಟು ಎಲ್ಲಿಗೆ ಹೋಗಿವೆ ಎಂದು ಯಾರಿಗೂ ಗೊತ್ತಿಲ್ಲ. ಹೇಗಾದರೂ ಪ್ರಯತ್ನಪಟ್ಟು ಮರಿಯನ್ನು ಅಮ್ಮನ ಬಳಿ ಸೇರಿಸಲು ಅರಣ್ಯಾಧಿಕಾರಿಗಳು ಮರಿ ಆನೆಯನ್ನು ಕೊಂಡೊಯ್ದರು.
ಮೂಡಿಗೆರೆ-ಸಕಲೇಶಪುರ ಗಡಿಯಲ್ಲಿ ಬೀಡುಬಿಟ್ಟಿರೋ ಕಾಡಾನೆಗಳ ತಂಡದಿಂದ ತಪ್ಪಿಸಿಕೊಂಡ ಮರಿ ಇರಬಹುದು ಎಂದು ಅಧಿಕಾರಿಗಳಿಗೆ ಶಂಕೆ ವ್ಯಕ್ತಪಡಿಸಿದ್ದಾರೆ.