Advertisement

ಮೊರಾರ್ಜಿ ವಸತಿ ಶಾಲೆಗೆ ಜಿಪಂ ಸದಸ್ಯ ಭೇಟಿ-ಪರಿಶೀಲನೆ

04:28 PM Nov 23, 2019 | Team Udayavani |

ಚಿಕ್ಕಮಗಳೂರು: ತಾಲೂಕಿನ ಬೀಕನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಜಿಲ್ಲಾ ಪಂಚಾಯತ್‌ ಸದಸ್ಯ ಬಿ.ಜಿ.ಸೋಮಶೇಖರ್‌ ದಿಢೀರ್‌ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.

Advertisement

ವಸತಿ ಶಾಲೆಯ ಅಡುಗೆ ಕೋಣೆಗೆ ತೆರಳಿ ತರಕಾರಿಗಳ ಗುಣಮಟ್ಟ ಪರಿಶೀಲಿಸಿದ ಅವರು, ವಿದ್ಯಾರ್ಥಿಗಳಿಗಾಗಿ ತಯಾರಿಸಿದ್ದ ಇಡ್ಲಿ- ಚಟ್ನಿ ಫಲಹಾರ ರುಚಿ ಸವಿದರು. ನಂತರ ಮಾತನಾಡಿದ ಸೋಮಶೇಖರ್‌, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಹಾಸ್ಟೆಲ್‌ಗ‌ಳಲ್ಲಿ ಸರ್ಕಾರ ವಿವಿಧ ಸವಲತ್ತುಗಳನ್ನು ನೀಡಿದೆ. ಜಿಲ್ಲೆಯ ಎಲ್ಲಾ ವಸತಿ ಶಾಲೆ, ನಿಲಯಗಳಲ್ಲಿ ಸ್ವತ್ಛತೆ, ಶುಚಿ, ರುಚಿ ಹಾಗೂ ಗುಣಮಟ್ಟ ಕಾಪಾಡಬೇಕು. ವಿದ್ಯಾರ್ಥಿಗಳಿಗೆ ನೀಡುವ ಆಹಾರ ಪದಾರ್ಥಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಯಾವುದೇ ತರಕಾರಿ ಪದಾರ್ಥಗಳು ಕೊಳೆಯದಂತೆ ಎಚ್ಚರ ವಹಿಸಬೇಕು. ಹಾಳಾದ ದಿನಸಿ ಸಾಮಗ್ರಿಗಳನ್ನು ಅಡುಗೆಗೆ ಬಳಸಬಾರದು ಎಂದು ವಾರ್ಡನ್‌ಗೆ ಸೂಚಿಸಿದರು.

ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಊಟ-ತಿಂಡಿ ನೀಡುವ ವಿಚಾರದಲ್ಲಿ ಗೊಂದಲವಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಶಿಕ್ಷಕರ ಹೊಂದಾಣಿಕೆ ಕೊರತೆಯಿಂದ ಈ ಅಚಾತುರ್ಯವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ, ಎಲ್ಲರನ್ನೂ ಒಗ್ಗೂಡಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲು ಸೂಚಿಸಲಾಗುವುದು. ಶುಚಿತ್ವ ಮತ್ತು ಆಹಾರ ಪೂರೈಕೆ ಉತ್ತಮವಾಗಿದೆ ಎಂಬುದು ಖಾತ್ರಿಯಾಗಿದೆ ಎಂದರು.

ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಕಾರ್ಯಾಗಾರದಲ್ಲಿ ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಐಟಿಡಿಪಿ ಇಲಾಖೆ ಹಾಸ್ಟೆಲ್‌ಗ‌ಳ ವಾರ್ಡ್‌ನ್‌ ಮತ್ತು ಪ್ರಾಂಶುಪಾಲರಿಗೆ ಅಡುಗೆ ಮನೆ ಶುಚಿತ್ವ ಹಾಗೂ ಸರ್ಕಾರ ನೀಡಿರುವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಯಾವ ರೀತಿ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು, ಶಿಕ್ಷಕರು ಮಕ್ಕಳಿಗೆ ಯಾವ ರೀತಿ ಪಾಠ ಪ್ರವಚನ ಮಾಡಬೇಕು ಹಾಗೂ ಆಟೋಟಗಳಲ್ಲಿ ತೊಡಗಬೇಕೆಂಬುದರ ಬಗ್ಗೆ ತಿಳಿಸಲಾಗಿತ್ತು. ಅದು ಯಶಸ್ವಿಯಾಗಿದೆ ಎಂದು ಹೇಳಿದರು. ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಬೀರೇಗೌಡ, ವಾರ್ಡ್‌ನ್‌ ಶೃತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next