ಚಿಕ್ಕಮಗಳೂರು: ಕೊರೊನಾ ವೈರಸ್ ಬಗ್ಗೆ ಆತಂಕ ಬೇಡ. ಆದರೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಹೇಳಿದರು.
ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋವೆಲ್ ಕೊರೊನಾ ವೈರಸ್‌ನ ಮುನ್ನೆಚ್ಚರಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ನಮ್ಮ ನೆರೆಯ ದೇಶ ಚೀನಾದಲ್ಲಿ ವ್ಯಾಪಕವಾಗಿ ಹರಡಿ 427ಕ್ಕೂ ಹೆಚ್ಚು ಜನ ಮರಣ ಹೊಂದಿರುವ ಬಗ್ಗೆ ವರದಿಗಳಾಗಿವೆ. ಅಲ್ಲದೇ, ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ ಕೊರೊನಾ ವೈರಸ್‌ನಿಂದ ವ್ಯಕ್ತಿಗಳಿಬ್ಬರು ಬಳಲುತ್ತಿರುವುದು ಖಚಿತವಾಗಿದ್ದು, ನಮ್ಮ ಜಿಲ್ಲೆಗೂ ರೋಗ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಸಾಮಾನ್ಯವಾಗಿ ವೈರಾಣು ಬಾ ತರಿಗೆ ವಿಪರೀತ ಜ್ವರ, ತಲೆನೋವು, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಬೇಧಿ ಕಂಡು ಬರುತ್ತದೆ. ವೈರಸ್ ಸಾಮಾನ್ಯ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಅಂತಹ ವ್ಯಕ್ತಿಯ ಜೊತೆ ನಿಕಟ ಸಂಪರ್ಕ ಹೊಂದಿದಾಗ ಅಸುರಕ್ಷಿತ ಸ್ಥಳ ಹಾಗೂ ವಸ್ತುಗಳನ್ನು ಸ್ಪರ್ಶಿಸಿ ಕಣ್ಣು, ಬಾಯಿ, ಮೂಗುಗಳನ್ನು ಮುಟ್ಟುವುದರಿಂದ ವೈರಸ್ ಗಳು ಹರಡುವ ಸಾಧ್ಯತೆ ಇರುತ್ತವೆ. ಆದ್ದರಿಂದ, ಕೈಗಳನ್ನು ಆಗಾಗ ಶುಚಿಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಸೋಂಕಿತ ವ್ಯಕ್ತಿಗೆ ಚಿಕಿತ್ಸೆಯನ್ನು ಮೊದಲ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತದಲ್ಲಿ ಯಾವ ರೀತಿ ನೀಡಬೇಕು ಎಂಬುವುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ರೋಗಿಗೆ ಬಳಸಲಾದ ವಸ್ತುಗಳ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಜನಸಾಮಾನ್ಯರಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳ ಬಗ್ಗೆ ಅರಿವು ಮೂಡಿಸಬೇಕು. ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುಬೇಕೆಂದು ವೈದ್ಯಾಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕೇರಳದಿಂದ ಎನ್.ಆರ್.ಪುರಕ್ಕೆ ಹೆಚ್ಚಿನ ಜನರು ಬಂದು ಹೋಗುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್.ಕೆ.ಪ್ರಭು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಮಂಜುನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ| ಅಶ್ವತ್‌ಬಾಬು, ರೋಗವಾಹಕ ಆಶ್ರಿತ ರೋಗ ನಿವಾರಣಾಧಿಕಾರಿ ಡಾ| ಹರಿಶ್‌ಬಾಬು, ನಗರಸಭಾ ಪೌರಾಯುಕ್ತ ಚಂದ್ರಶೇಖರ್ ಉಪಸ್ಥಿತರಿದ್ದರು.