Advertisement
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಚಿವ ಸಿ.ಟಿ.ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲಾ ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಸೇರಿದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅಲ್ಲದೇ, ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದರು.
Related Articles
Advertisement
ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಪ್ರಾರಂಭ ಮಾಡಲು ಕನಿಷ್ಠ 30 ಸಾವಿರ ನೋಂದಾಯಿತ ಕಾರ್ಮಿಕರ ಸಂಖ್ಯೆ ಇರಬೇಕು. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಸಾಕಷ್ಟಿದ್ದರೂ ನೋಂದಣಿ ಆಗಿಲ್ಲ. ಆದ್ದರಿಂದ ತಕ್ಷಣ ಕಾರ್ಮಿಕ ಇಲಾಖೆ ಎಲ್ಲಾ ಕಾರ್ಮಿಕರನ್ನು ತುರ್ತಾಗಿ ನೋಂದಣಿ ಮಾಡಲು ತಿಳಿಸಿದರು.
ಕರಗಡ ಹಾಗೂ ಮಳಲೂರು ಏತ ನೀರಾವರಿ ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಲು ಸಚಿವ ರವಿ ಹಾಗೂ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದಾಗ, ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಮುಖ್ಯಮಂತ್ರಿಗಳು ಆದೇಶಿಸಿದರು.
ಏರ್‌ಸ್ಟ್ರಿಪ್‌ಗೆ ಭೂಮಿ ಖರೀದಿ: ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ಆಕರ್ಷಣೆಯ ಜಿಲ್ಲೆಯಾಗಿ ಮಾರ್ಪಟ್ಟಿದ್ದು, ಇಲ್ಲಿ ಸಣ್ಣ ವಿಮಾನಗಳು ಇಳಿಯಲು ಏರ್‌ಸ್ಟ್ರಿಪ್ ಒಂದನ್ನು ನಿರ್ಮಾಣ ಮಾಡಬೇಕಾಗಿದೆ. ಇದಕ್ಕೆ 900X150 ಮೀಟರ್ ರನ್‌ವೇ ಅಗತ್ಯವಿರುವುದರಿಂದ ಇನ್ನೂ 34 ಎಕರೆ ಜಮೀನು ಬೇಕಾಗಿದೆ ಎಂದು ಸಂಬಂಧಿಸಿದ ಪ್ರಾಧಿಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜಮೀನನ್ನು ನೀಡಲು ಮುಖ್ಯಮಂತ್ರಿಗಳು ತಿಳಿಸಿದರು. ಆಗ, ಈಗಾಗಲೇ 14 ಎಕರೆ ಜಾಗ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಉಳಿದ ಜಾಗವನ್ನು ಪಡೆಯಲು ಕ್ರಮ ಕೈಗೊಳ್ಳಲಾಗುವುದೆಂದರು. ಅಗತ್ಯ ಜಮೀನನ್ನು ಕೆ.ಎಸ್.ಎಸ್.ಐ.ಡಿ.ಸಿ.ಗೆ ನೇರವಾಗಿ ಖರೀದಿಸಲು ಅನುಮತಿ ನೀಡಲು ಮುಖ್ಯಮಂತ್ರಿಗಳು ಹೇಳಿದರು.
688 ಕೋಟಿ ರೂ. ನಷ್ಟ: ಜಿಲ್ಲೆಯಲ್ಲಿ ಮಹಾಮಳೆಗೆ ಉಂಟಾದ ಭೂಕುಸಿತದಿಂದ 688 ಕೋಟಿ ರೂ. ಆಸ್ತಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದಾಗ, ಇದರಲ್ಲಿ ಎನ್.ಡಿ.ಆರ್.ಎಫ್. ಅನುದಾನ 84 ಕೋಟಿ ರೂ. ಹೊರತುಪಡಿಸಿ ಉಳಿದ ಹಣವನ್ನು ಬಿಡುಗಡೆ ಮಾಡಲು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಹಾಗೂ ಮತ್ತೆ ಮಳೆ ಬಂದಲ್ಲಿ ಹಾನಿಗೆ ತುತ್ತಾಗಬಹುದಾದ ಮನೆಗಳಲ್ಲಿ ಇರುವವರನ್ನು ತಕ್ಷಣ ಸ್ಥಳಾಂತರ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದರು. ಸ್ಥಳಾಂತರ ಮಾಡುವ ಮುನ್ನ ಸೂಕ್ತ ಜಾಗ ಗುರುತಿಸಿ ಸುಸಜ್ಜಿತ ಬಡಾವಣೆಯನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
ಮನೆ ಕಳೆದುಕೊಂಡವರಿಗೆ ಕನಿಷ್ಠ 30X40 ಅಳತೆಯ ನಿವೇಶನ ನೀಡಬೇಕು. ಸರ್ಕಾರ ಕೊಡುವ 5 ಲಕ್ಷ ರೂ. ಜೊತೆಗೆ ಫಲಾನುಭವಿಯೇ ಹೆಚ್ಚಿನ ಹಣ ಹಾಕಲು ಮುಂದೆ ಬಂದಲ್ಲಿ ಅದಕ್ಕೂ ಅವಕಾಶವಿರಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅತಿವೃಷ್ಟಿಯಿಂದ 483 ಎಕರೆ ಕಾಫಿ, ಅಡಕೆ ಹಾಗೂ ಇತರೆ ಜಮೀನು ಹಾಳಾಗಿದ್ದು, ಅವರಿಗೆ ಪರ್ಯಾಯ ಜಾಗ ನೀಡಲು ಕಂದಾಯ ಭೂಮಿ ಲಭ್ಯತೆಯನ್ನು ಕಂಡುಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು. ಈಗಾಗಲೇ 249 ಎಕರೆ ಪ್ರದೇಶ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿಗೌತಮ್ ತಿಳಿಸಿದರು.
ವಿಪರೀತ ಮಳೆಯಿಂದ ತೀವ್ರ ಹಾನಿಗೊಳಗಾಗಿರುವ 9 ಗ್ರಾಮಗಳ ಸ್ಥಿತಿಯನ್ನು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೇ.70 ರಷ್ಟು ಹಾನಿಗೊಳಗಾಗಿರುವ ಈ ಪ್ರದೇಶದಲ್ಲಿ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ ಎಂದಾಗ, ಆ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು ಅವರಿಗೆ ಪರ್ಯಾಯವಾಗಿ ಭೂಮಿ ನೀಡಲು ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಟಿ.ಡಿ.ರಾಜೇಗೌಡ, ಡಿ.ಎಸ್.ಸುರೇಶ್, ಬೆಳ್ಳಿಪ್ರಕಾಶ್, ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿ.ಪಂ. ಸಿಇಒ ಎಸ್.ಅಶ್ವತಿ ಭಾಗವಹಿಸಿದ್ದರು.