Advertisement
ದಾಖಲೆ ಮತಗಳ ಜಯ: ಕ್ಷೇತ್ರ ಪುನರ್ವಿಂಗಡಣೆಯ ನಂತರ ನಡೆದಿರುವ 4ನೇ ಚುನಾವಣೆಯಲ್ಲಿ ಈ ಬಾರಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನೂತನ ದಾಖಲೆ ನಿರ್ಮಿಸಿದ್ದಾರೆ.
Related Articles
Advertisement
ಅನುಕೂಲವಾಗದ ಮೈತ್ರಿ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆದಿತ್ತು. ಈ ಬಾರಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಜೆಡಿಎಸ್ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟು ಕೊಟ್ಟಿತ್ತು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗಳಿಸಿದ ಮತಗಳನ್ನು ಒಟ್ಟುಗೂಡಿಸಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬ ಮಾತುಗಳನ್ನು ಎರಡೂ ಪಕ್ಷಗಳು ಹೇಳುತ್ತಿದ್ದವಾದರೂ ಚುನಾವಣೆಯಲ್ಲಿ ಆ ರೀತಿ ಆಗಿಲ್ಲ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ವಲ್ಪ ನೆಲೆ ಇತ್ತಾದರೂ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯೇ ಇಲ್ಲದಿದ್ದರೂ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೂ ಬಿಜೆಪಿಗೆ ಬಾರೀ ಗೆಲುವು ದೊರೆಯಲು ಕಾರಣವಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಚಿಹ್ನೆ ಇಲ್ಲದೆ ಚುನಾವಣೆ ನಡೆದಿದ್ದು, ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರಿಗೆ ಗೊಂದಲವಾಗಿದ್ದು ಸಹ ಬಿಜೆಪಿಗೆ ಹೆಚ್ಚು ಮತ ದೊರೆಯಲು ಕಾರಣವಾಯಿತು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಬಿಜೆಪಿ ಭದ್ರಕೋಟೆ: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಂಠಪ್ಪ ಮೂರು ಬಾರಿ ಗೆಲುವು ಸಾಧಿಸಿದ್ದರು. ಕ್ಷೇತ್ರ ಪುನರ್ವಿಂಗಡಣೆಯ ನಂತರ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ವಿ.ಸದಾನಂದಗೌಡ ಸುಮಾರು 27 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸುವ ಮೂಲಕ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯಾಗಿಸಿದ್ದರು.
ಡಿ.ವಿ.ಸದಾನಂದಗೌಡ ರಾಜ್ಯದ ಮುಖ್ಯಮಂತ್ರಿಯಾಗಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಬಿಜೆಪಿಯ ಸುನಿಲ್ಕುಮಾರ್ ಅವರನ್ನು 46 ಸಾವಿರ ಮತಗಳ ಅಂತರದಿಂದ ಸೋಲಿಸುವ ಮೂಲಕ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡಿದ್ದರು.
ನಂತರ 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 1.81 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದ್ದರು. ಇದೀಗ ಶೋಭಾ ಕರಂದ್ಲಾಜೆ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಸೋಲಿಸುವ ಮೂಲಕ ಭದ್ರಕೋಟೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.