ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆ ಹಸಿರು ವಲಯದಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಲಾಕ್‌ಡೌನ್ ನಲ್ಲಿ ಸ್ವಲ್ಪಮಟ್ಟಿಗೆ ಸಡಿಲಿಕೆ ಮಾಡಲಾಗಿದೆ. ಲಾಕ್‌ಡೌನ್ ಸ್ಪಲ್ಪಮಟ್ಟಿಗೆ ಸಡಿಲಿಕೆಯಾದ ಕಾರಣ ಲಾಕ್‌ಡೌನ್ ಆರಂಭಗೊಂಡ ದಿನಗಳಿಗಿಂತ ಗುರುವಾರ ನಗರದಲ್ಲಿ ವಾಹನ ಸಂಚಾರ ಹಾಗೂ ಜನಸಂಚಾರ ಹೆಚ್ಚಳವಾಗಿತ್ತು. ಜಿಲ್ಲೆಯ ಗಡಿ ಪ್ರದೇಶದಲ್ಲಿ ಬೇರೆ ಜಿಲ್ಲೆಯ ವಾಹನಗಳು ಗಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲಾಗಿದೆ.
ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್‌ಗಳಲ್ಲಿ ಅನುಸರಿಸುತ್ತಿದ್ದ ಕಟ್ಟುನಿಟ್ಟಿನ ಕ್ರಮಗಳನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ಮಳಿಗೆ, ಪೆಟ್ರೋಲ್ ಬಂಕ್, ಬ್ಯಾಂಕ್, ಖಾಸಗಿ ಆಸ್ಪತ್ರೆಗಳು ಸೇರಿದಂತೆ ತುರ್ತು ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಲಾಕ್‌ಡೌನ್ ಸಡಿಲಗೊಳಿಸಿ ಕೆಲ ಕೈಗಾರಿಕೆ ಆರಂಭಿಸಲು ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಕೈಗಾರಿಕೆಗಳಿಗೆ ಸೂಚಿಸಲಾಗಿದೆ. ಬಾಗಿಲು ಹಾಕಿದ್ದ ಅನೇಕ ಕೈಗಾರಿಕೆಗಳು ಕೆಲಸ ಪುನಃ ಪ್ರಾರಂಭಿಸಿವೆ. ಜಿಲ್ಲೆಯಲ್ಲಿ 3 ದೊಡ್ಡ ಕೈಗಾರಿಕೆ, 6 ಮಧ್ಯಮ ವರ್ಗದ ಕೈಗಾರಿಕೆ ಹಾಗೂ 5,552 ಸಣ್ಣಕೈಗಾರಿಕೆಗಳಿವೆ. ಸುಮಾರು 21 ಸಾವಿರಕ್ಕೂ ಹೆಚ್ಚಿನ ಜನರು ಈ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ಸರ್ಕಾರದ ಆದೇಶದಂತೆ ಈಗಾಗಲೇ ಕಾಫಿ ಕ್ಯೂರಿಂಗ್, ಟೀ ಉದ್ಯಮ, ಅಕ್ಕಿ ಗಿರಣಿ, ಬೇಕರಿ, ಹಿಟ್ಟಿನ ಗಿರಣಿ, ಆಹಾರ ಉತ್ಪಾದನಾ ಘಟಕಗಳು ಕಾರ್ಯ ಪ್ರಾರಂಭಿಸಿವೆ. ಗುರುವಾರ ಸರ್ಕಾರ ಲಾಕ್‌ಡೌನ್ ಸಡಲಿಸಿ ಆದೇಶ ನೀಡಿದ ಬಳಿಕ ಜಿಲ್ಲೆಯಲ್ಲಿರುವ 32 ಸ್ಟೋನ್ ಕ್ರಷರ್‌ಗಳನ್ನು ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಕೃಷಿ ಚಟುವಟಿಕೆಗೆ ಲಾಕ್ ಡೌನ್‌ನ ಯಾವುದೇ ನಿರ್ಬಂಧ ವಿಧಿಸದೇ, ಮುಕ್ತ ಅವಕಾಶ ನೀಡಿದೆ. ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಆರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಗರ ಪ್ರದೇಶದ ಕಡೆ ಮುಖಮಾಡದೆ ಇದ್ದ ಗ್ರಾಮೀಣ ಪ್ರದೇಶದ ಜನರು ಬೈಕು, ಕಾರುಗಳಲ್ಲಿ ನಗರ ಪ್ರದೇಶಗಳತ್ತ ಮುಖ ಮಾಡಿದ್ದಾರೆ.