Advertisement

ಜಾನಪದ ಕಲೆ ಪರಿಚಯಿಸಿದ ಧೀಮಂತ ಡಾ|ನಾಗೇಗೌಡ

04:28 PM Oct 25, 2019 | Naveen |

ಚಿಕ್ಕಮಗಳೂರು: ಕನ್ನಡದ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಧೀಮಂತ ವ್ಯಕ್ತಿ ಡಾ| ಎಚ್‌. ಎಲ್‌.ನಾಗೇಗೌಡರು ಎಂದು ಜಾನಪದ ವಿದ್ವಾಂಸ ಡಾ| ಎಚ್‌.ಎಲ್‌.ಮಲ್ಲೇಶ್‌ಗೌಡ ಹೇಳಿದರು.

Advertisement

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ನಗರದ ಎಐಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾನಪದ ತಜ್ಞ ಡಾ| ಎಚ್‌.ಎಲ್‌.ನಾಗೇಗೌಡರ ಬದುಕು ಬರಹ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.

ಜಾನಪದ ತಜ್ಞ ಡಾ| ಎಚ್‌.ಎಲ್‌ .ನಾಗೇಗೌಡರು ಕಥೆ, ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ ಸೇರಿದಂತೆ 21 ಬೃಹತ್‌ ಕೃತಿಗಳನ್ನು ರಚಿಸಿದ್ದಾರೆ. ಅವೆಲ್ಲವೂ 400-500 ರಷ್ಟು ಪುಟಗಳದ್ದಾಗಿವೆ. ನಾಗೇಗೌಡರು ಬರೆದಿರುವ 8 ಸಂಪುಟಗಳ ಕೃತಿ ಪ್ರವಾಸಿ ಕಂಡ ಇಂಡಿಯಾ ಭಾರತದ ಇತಿಹಾಸವನ್ನು ಪುನರಾವಲೋಕನ ಮಾಡುವುದಕ್ಕೆ ದೇಶದ ಇತಿಹಾಸಕಾರರಿಗೆ ಒಂದು ಮೌಲಿಕ ಕೃತಿಯಾಗಿದೆ ಎಂದರು.

ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನಾಗೇಗೌಡರು ಐಎಎಸ್‌ ಅಧಿಕಾರಿಯಾಗಿ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಯಾವ ಸರ್ಕಾರಗಳೂ, ಯಾವ ವಿಶ್ವವಿದ್ಯಾಲಯಗಳೂ ಮಾಡಲಾಗದಷ್ಟು ಜಾನಪದದ ಸಂಶೋಧನೆಯನ್ನು ಅವರು ಮಾಡಿದ್ದಾರೆ. ದೇಶದ ಅತ್ಯಂತ ಹಿರಿಯ ವಯಸ್ಸಿನ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಒಬ್ಬ ಐಎಎಸ್‌ ಅಧಿಕಾರಿಯಾಗಿ ಗುಡ್ಡಬೆಟ್ಟ ಹತ್ತಿ ಹಳ್ಳಿ ಹಳ್ಳಿಗೆ ಹೋಗಿ ಅತ್ಯಂತ ಪರಿಶ್ರಮದಿಂದ ನಮ್ಮ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಸಂಗ್ರಹಿಸಿದ್ದಾರೆ. 1500 ಗಂಟೆಗಳಷ್ಟು ಕಾಲ ಕೇಳಬಹುದಾದ ಜಾನಪದದ ಧ್ವನಿ ಸುರುಳಿ ಹಾಗೂ 800 ಗಂಟೆಗಳಷ್ಟು ಕಾಲ ವೀಕ್ಷಿಸಬಹುದಾದ ವೀಡಿಯೋವನ್ನು ಅವರು ಜಾನಪದ ಲೋಕದಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ವಿವಿ ಕುಲಸಚಿವ ಡಾ|
ಸಿ.ಕೆ.ಸುಬ್ರಾಯ, ಜಾನಪದ ತಜ್ಞ ಡಾ| ಎಚ್‌. ಎಲ್‌.ನಾಗೇಗೌಡರು ಜಾನಪದದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರು ನಿರ್ಮಿಸಿರುವ ಜಾನಪದ ಲೋಕ ಜಗತ್ತಿಗೆ ಮಾದರಿಯಾಗಿದೆ ಎಂದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್‌, ಜಾನಪದ ತಜ್ಞ ಡಾ| ಎಚ್‌.ಎಲ್‌.ನಾಗೇಗೌಡರ ಬದುಕು ಮತ್ತು ಬರಹಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕಲಾವಿದರಾದ ಜಿ.ಬಿ.ಸುರೇಶ್‌, ಬಿಳಗಲಿ ನಾಗರಾಜ್‌, ಚಂದ್ರಶೆಟ್ಟಿ, ಹರಿಣಾಕ್ಷಿ ಮತ್ತು ಜ್ಯೋತಿ ವಿನೀತ್‌ಕುಮಾರ್‌ ಅವರಿಂದ ನಡೆದ ಜಾನಪದ ಕಾರ್ಯಕ್ರಮ ಗಮನ ಸೆಳೆಯಿತು. ಕಾಲೇಜಿನ ಪ್ರಾಂಶುಪಾಲ ಡಾ| ಸಿ.ಟಿ.ಜಯದೇವ ಅಧ್ಯಕ್ಷತೆ ವಹಿಸಿದ್ದರು.

ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ| ಜೆ.ಪಿ.ಕೃಷ್ಣೇಗೌಡ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಂಗಕರ್ಮಿ ವಿನೋದ್‌ ಕುಮಾರ್‌ ಉಪಸ್ಥಿತರಿದ್ದರು. ಗ್ರಂಥಪಾಲಕಿ ಎಂ.ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ತಿನ ಜಿಲ್ಲಾ ಪ್ರಧಾನ ರ್ಯದರ್ಶಿ ಜಿ.ಬಿ.ವಿರೂಪಾಕ್ಷ ಸ್ವಾಗತಿಸಿ, ಮೂಡಿಗೆರೆ ತಾಲೂಕು ಗೌರವಾಧ್ಯಕ್ಷ ಡಾ| ಮೋಹನ್‌ ರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next