Advertisement

ಜಂಟಿ ಸರ್ವೇ ಕಾರ್ಯ ಸಂಪೂರ್ಣ

01:35 PM Jul 13, 2019 | Naveen |

ಚಿಕ್ಕಮಗಳೂರು: ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಸಂಪೂರ್ಣವಾಗಿದ್ದು, ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಬಾಕಿ ಉಳಿದಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಟಿ ಸರ್ವೆ ಕಾರ್ಯ ಜಿಲ್ಲೆಯಾದ್ಯಂತ ಪೂರ್ಣಗೊಂಡಿದೆ. ದಾಖಲೆಯಲ್ಲಿರುವ ವಿಸ್ತೀರ್ಣಕ್ಕೂ, ವಾಸ್ತವ ವಿಸ್ತೀರ್ಣಕ್ಕೂ ಕೆಲವೆಡೆ ವ್ಯತ್ಯಾಸಗಳು ಕಂಡು ಬಂದಿವೆ. ಈ ವಿಚಾರವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಹೊಂದಾಣಿಕೆ ಸಭೆ ಒಂದು ಬಾರಿ ನಡೆದಿದೆ. ಸೋಮವಾರ ಮತ್ತೂಂದು ಸಭೆ ನಡೆಯಲಿದೆ ಎಂದು ತಿಳಿಸಿದರು.

ಕಂದಾಯ ಹಾಗೂ ಅರಣ್ಯ ಇಲಾಖೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಮಾತ್ರ ಬಾಕಿ ಉಳಿದಿದೆ. ಹೊಂದಾಣಿಕೆ ಸಭೆ ಪೂರ್ಣಗೊಂಡ ನಂತರ ಈ ಕೆಲಸವನ್ನೂ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ನಿರ್ಣಯವಾಗಿಲ್ಲ: ಕುದುರೆಮುಖದ ಟೌನ್‌ಶಿಪ್‌ ಅನ್ನು ಕಳಸ ತಾಲೂಕು ಕೇಂದ್ರದ ತಾಲೂಕು ಕಚೇರಿ ಸೇರಿದಂತೆ ಇನ್ನಿತರೆ ಕಚೇರಿ ಕಟ್ಟಡಗಳಿಗೆ ಬಳಸಿಕೊಳ್ಳುವ ಕುರಿತು ನಿರ್ಣಯವಾಗಿಲ್ಲ. ಅದು ಈಗಲೂ ಕೇವಲ ಚರ್ಚೆಯ ವಿಷಯವಾಗಿದೆಯಷ್ಟೆ. ಟೌನ್‌ಶಿಪ್‌ ಸ್ಥಳದ ಕುರಿತು ಕೆಲವು ತೊಡಕುಗಳಿವೆ. ಈ ಕುರಿತು ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಲಾ ಗಿದೆ. ಇರುವ ಕಾನೂನು ತೊಡಕುಗಳ ಕುರಿತೂ ಚರ್ಚಿಸಲಾಗಿದೆ ಎಂದರು.

ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿ ತೀರ್ಪಿಗೆ ಒಳಪಟ್ಟ ಸ್ಥಳವನ್ನು ಬಳಸಿಕೊಳ್ಳಬೇಕಾಗಿದೆ. ಎಲ್ಲ ವಿಚಾರಗಳನ್ನು ಪರಿಶೀಲಿಸಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಈ ವಿಚಾರವಾಗಿ ಯಾವುದೇ ನಿರ್ಣಯ ಕೈಗೊಂಡಿಲ್ಲ. ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆದುಕೊಳ್ಳಲಾಗುವುದು. ಅಂತಿಮ ನಿರ್ಣಯ ಸರ್ಕಾರದ್ದು ಎಂದು ಸ್ಪಷ್ಟಪಡಿಸಿದರು.

Advertisement

ಭದ್ರಾ ನದಿಯಲ್ಲಿ ರ್ಯಾಫ್ಟಿಂಗ್‌ ನಡೆಸಲು ನೀಡಿರುವ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ತಮಗೆ ದೂರು ಬಂದಿದೆ. ಪರಿಶೀಲನೆ ನಡೆಸಲಾಗಿದೆ. ಕಾನೂನು ತಜ್ಞರ ವರದಿಯನ್ನು ಕೇಳಲಾಗಿದೆ. ಅವರಿಂದ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬಂದಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಜನವರಿ 1 ರಿಂದ ಜು.10ರವರೆಗೆ 637 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 423 ಮಿ.ಮೀ. ಮಾತ್ರ ಮಳೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮಲೆನಾಡು ಪ್ರದೇಶಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ನದಿ ನೀರುಗಳಲ್ಲಿ ಹರಿವು ಹೆಚ್ಚಾಗಿದೆ. ತಾವು ಸಹ ಕೆಲವೆಡೆ ಪ್ರವಾಸ ಮಾಡಿ ಪರಿಶೀಲಿಸಿದ್ದು, ಎಲ್ಲಿಯೂ ಪ್ರವಾಹದ ಭೀತಿ ಎದುರಾಗಿಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

2018-19ನೇ ಸಾಲಿನಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದವರಿಗೆ ಈವರೆಗೂ ಬಿಲ್ ಪಾವತಿಸಿಲ್ಲ. ಸರ್ಕಾರದ ಆದೇಶದನ್ವಯ ನೀರು ಸರಬರಾಜಾಗಿರಲಿಲ್ಲ ಎಂಬ ಕಾರಣದಿಂದ ಅದನ್ನು ತಡೆಹಿಡಿಯಲಾಗಿತ್ತು. ಈಗ ಉಪವಿಭಾಗಾಧಿಕಾರಿ, ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನೀರು ಸರಬರಾಜು ಮಾಡಿರುವುದನ್ನು ಖಚಿತಪಡಿಸಿಕೊಂಡು ವರದಿ ಸಲ್ಲಿಸಲು ಸೂಚಿಸಲಾಗಿದೆ. ಅವರು ಈ ಕುರಿತು ಪರಿಶೀಲನೆ ನಡೆಸುತ್ತಿದ್ದು, ವರದಿ ಸಲ್ಲಿಸಿದ ಕೂಡಲೆ ಬಿಲ್ ಪಾವತಿಸಲಾಗುವುದು. ಹಣದ ಕೊರತೆ ಇಲ್ಲ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next