Advertisement
ಜಿಪಂ ಕಚೇರಿಯ ನಜೀರ್ ಸಾಬ್ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಬಿ.ಜಿ. ಸೋಮಶೇಖರ್, ಅಲ್ಪಸಂಖ್ಯಾತರ ಇಲಾಖೆಯ ಅಧೀನದಲ್ಲಿ ಪ್ರತಿ ತಾಲೂಕಿನಲ್ಲಿ ಮಾಹಿತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರ ಇಲಾಖೆಯಿಂದ ದೊರೆಯುವ ಸವಲತ್ತುಗಳ ಕುರಿತು ಅಲ್ಪಸಂಖ್ಯಾತರಿಗೆ ತಿಳಿಸಲು 4,800 ರೂ. ಪ್ರತಿ ಕಾರ್ಯಕ್ರಮಕ್ಕೆ ಖರ್ಚು ಮಾಡಬೇಕಾಗಿದೆ ಎಂದು ತಿಳಿಸಿದರು.
Related Articles
Advertisement
ಕೃಷಿ ಮತ್ತು ತೋಟಗಾರಿಕೆ ಬೆಳೆಗಳಾದ ಕಾಫಿ, ಅಡಕೆ, ಕಾಳು ಮೆಣಸು ಶೇ.90 ರಷ್ಟು ಉದುರಿಹೋಗಿದೆ. ಸಮಗ್ರ ಮಾಹಿತಿ ಸಂಗ್ರಹಣೆಗೆ ಸಂಬಂಧಿಸಿದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ರಾಮಸ್ವಾಮಿ ತಿಳಿಸಿದರೆ, ಚಿಕ್ಕಮಗಳೂರು ತಾಲೂಕನ್ನು ಅತಿವೃಷ್ಟಿ ವ್ಯಾಪ್ತಿಗೆ ಸೇರಿಸುವಂತೆ ಸೋಮಶೇಖರ್ ಆಗ್ರಹಿಸಿದರು. ಕಾಫಿ ಮಂಡಳಿಯವರು ಕಾಫಿ ಬೆಳೆ ನಷ್ಟವನ್ನು ಅಂದಾಜಿಸಲು ಸರ್ವೆ ಕಾರ್ಯ ನಡೆಸಿಲ್ಲವೆಂದು ಸದಸ್ಯೆ ಕವಿತಾ ರಂಗರಾಜು ಹೇಳಿದರು.
ಅತಿವೃಷ್ಟಿಯಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಸ್ಪಂದಿಸಿದ್ದರಿಂದ ಅಧಿಕ ಸಾವು-ನೋವುಗಳನ್ನು ತಡೆಯಲಾಗಿದೆ. ಕೆಲವು ಇಲಾಖೆಯವರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿಲ್ಲವೆಂದು ಆರೋಪಿಸಿದ ಮೂಡಿಗೆರೆ ತಾಪಂ ಅಧ್ಯಕ್ಷ ರತನ್, ಬೆಳೆ ನಷ್ಟಕ್ಕೆ ಕಡಿಮೆ ಪರಿಹಾರ ದೊರೆಯುತ್ತದೆ.
ಗುಡ್ಡ ಕುಸಿದು ಕೃಷಿ ಜಮೀನು ನಾಶವಾಗಿದ್ದರೆ ಹೆಚ್ಚು ಪರಿಹಾರ ದೊರೆಯುತ್ತಿದೆ. ಕೃಷಿ ಅಧಿಕಾರಿಗಳು ರೈತರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿಲ್ಲವೆಂದು ತಿಳಿಸಿದರು. ಮಲೆನಾಡಿನಲ್ಲಿ ಸಂಭವಿಸಿರುವ ನೆರೆ ಸಂತ್ರಸ್ತರ ನೋವಿಗೆ ಬಯಲು ಭಾಗದ ಜನರು ಸ್ಪಂದಿಸಿದ್ದಾರೆ. ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು ಸಂತ್ರಸ್ತರ ನೆರವಿಗೆ ಸ್ಪಂದಿಸಿರುವ ಅವರನ್ನು ಜಿಪಂ ವತಿಯಿಂದ ಸನ್ಮಾನಿಸಬೇಕೆಂದು ಸದಸ್ಯ ಶರತ್ ಕೃಷ್ಣಮೂರ್ತಿ ಸಲಹೆ ನೀಡಿದರು.
ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಜಿಪಂ ವರೆಗೆ ಅಧಿಕಾರ ಹಿಡಿದಿರುವ ಬಿಜೆಪಿ ಜಿಲ್ಲೆಯಲ್ಲಿ ಹೆಚ್ಚು ಶಾಸಕರು ಆಯ್ಕೆಯಾಗಿದ್ದು, ಸಂಸದರನ್ನು ಹೊಂದಿದೆ. ಇವರೆಲ್ಲರೂ ತಮಗೆ ದೊರೆತ ಸುವರ್ಣ ಅವಕಾಶವೆಂದು ತಿಳಿದು ಉತ್ತಮ ಕೆಲಸ ನಿರ್ವಹಿಸಿ, ಜಿಲ್ಲೆಗೆ ವಿಶೇಷ ಪ್ಯಾಕೇಜ್ ತರಬೇಕೆಂದು ಒತ್ತಾಯಿಸಿದರು.
ತಕ್ಷಣ ಮಧ್ಯ ಪ್ರವೇಶಿಸಿದ ಮೂಡಿಗೆರೆ ತಾಪಂ ಅಧ್ಯಕ್ಷ ರತನ್, ಅತಿವೃಷ್ಟಿಯಲ್ಲಿ ರಾಜಕಾರಣ ಬೇಡ. ಪಕ್ಷ ಹೊರಗಿಟ್ಟು ನೆರೆ ಸಂತ್ರಸ್ತರ ಪರವಾಗಿ ಎಲ್ಲ ಜನಪ್ರತಿನಿಧಿಗಳು ಕಾರ್ಯನಿರ್ವಹಿಸೋಣ ಎಂದು ಹೇಳಿದರು.
ನೆರೆಗೆ ಸಂಬಂಧಿಸಿದಂತೆ ಸರ್ಕಾರ ನೊಂದವರ ನೆರವಿಗೆ ನಿಂತಿದೆ. ಜಿಲ್ಲಾಡಳಿತ ಮನೆ ನಿರ್ಮಾಣಕ್ಕೆ ಜಾಗ ಗುರುತು ಮಾಡಿದೆ. ನೊಂದವರ ಪರವಾಗಿ ನಾವೆಲ್ಲ ಆಶಾಕಿರಣ ಮೂಡಿಸೋಣ ಎಂದು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರೆ, ನೆರೆ ಪ್ರದೇಶಕ್ಕೆ ಮುಖ್ಯಮಂತ್ರಿ, ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ. ಕೇಂದ್ರ ಸರ್ಕಾರದಿಂದಲೂ ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಪ್ರತಿ ಮಳೆಗಾಲದಲ್ಲಿ ಸಂಕಷ್ಟಕ್ಕೆ ಒಳಗಾಗುತ್ತಿರುವ ಬಂಡಿಮಠ ಮತ್ತು ಹೊಳೆಬಾಗಿಲು ಗ್ರಾಮಗಳನ್ನು ಸ್ಥಳಾಂತರಿ ಸಬೇಕು ಎಂದು ಸದಸ್ಯೆ ಚಂದ್ರಮ್ಮ ಒತ್ತಾಯಿಸಿದರೆ, ಕಳಸಾಕ್ಕೆ ಎಂಬಿಬಿಎಸ್ ವೈದ್ಯರನ್ನು ನೇಮಿಸುವಂತೆ ಪ್ರಭಾಕರ್ ಒತ್ತಾಯಿಸಿದರು.
ನೆರೆಪೀಡಿತ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಿದಂತೆ ಬರಪೀಡಿತ ಪ್ರದೇಶಗಳಿಗೂ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಬೆಳವಾಡಿ ರವೀಂದ್ರ ಮನವಿ ಮಾಡಿದರು.
ಬಹುಗ್ರಾಮ ಯೋಜನೆಗೆ ಸಮಗ್ರ ಯೋಜನಾ ವರದಿ ತಯಾರಾಗಿದೆ ಎಂದು ಜಿಪಂ ಅಧ್ಯಕ್ಷರು ಹೇಳಿದರು. ಮಳೆಗಾಲದಲ್ಲಿ ಭದ್ರಾ ನದಿಯ ಹೆಚ್ಚುವರಿ ನೀರನ್ನು ಏತ ನೀರಾವರಿ ಮೂಲಕ ಬಯಲು ಪ್ರದೇಶಕ್ಕೆ ತಿರುಗಿಸುವುದು ಸೂಕ್ತವೆಂದು ರಾಮಸ್ವಾಮಿ ಸಲಹೆ ನೀಡಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಒಂದೂವರೆ ವರ್ಷದಿಂದ ಸಂಬಳವಾಗಿಲ್ಲ ಎಂದು ತಿಳಿಸಿದ ಅಮಿತಾ ಮುತ್ತಪ್ಪ, ಇಲಾಖೆಯಲ್ಲಿರುವ ದುಡ್ಡು ಮೊಟ್ಟೆ ಹಾಕುತ್ತಾ ಎಂದು ಪ್ರಶ್ನಿಸಿ ಬೇರೆಯವರ ಜೀವನದ ಜೊತೆ ಚೆಲ್ಲಾಟ ಬೇಡವೆಂದರು. ಸಭೆಯಲ್ಲಿ ಉಪಾಧ್ಯಕ್ಷ ವಿಜಯಕುಮಾರ್, ಜಿಪಂ ಸಿಇಒ ಎಸ್.ಅಶ್ವತಿ ಇತರರಿದ್ದರು.