ಚಿಕ್ಕಮಗಳೂರು: ಅಧಿಕಾರಿಗಳು ಇಲಾಖೆಗೆ ಬರುವ ಅನುದಾನವನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ನೀಡಬೇಕೆಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದರು.
ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ಕೆಲಸ ಕೈಗೊಳ್ಳುವ ಮುಂಚೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದರಿಂದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹೆಚ್ಚಿನ ಗೌರವ ಬರುತ್ತದೆ ಎಂದರು. ಜಿಲ್ಲೆಯಲ್ಲಿ ಕೋವಿಡ್-19 ಆರೋಗ್ಯ ಇಲಾಖೆ ಜೊತೆಗೆ ಇತರ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುವ ಮೂಲಕ ಕೋವಿಡ್ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದು ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕೊಪ್ಪ ಕೃಷಿ ಇಲಾಖೆ ಕಟ್ಟಡ ಪೂರ್ಣಗೊಂಡು ಒಂದು ವರ್ಷ ಆದರೂ ಉದ್ಘಾಟನೆಗೊಂಡಿಲ್ಲ. ಪಶುಪಾಲನೆ ಇಲಾಖೆ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಜಿಪಂ ಸದಸ್ಯರ ಗಮನಕ್ಕೆ ತರದೆ ಸುಸ್ತಿರವಾಗಿರುವ ಕಟ್ಟಡಗಳ ದುರಸ್ಥಿಗೆ ಅನುದಾನ ಇಟ್ಟಿದ್ದಾರೆ. ಹೀಗೆ ಸರ್ಕಾರ ಹಣ ಪೋಲು ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ರೇಷ್ಮೆ ಇಲಾಖೆ ವತಿಯಿಂದ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಪಂ ಸದಸ್ಯ ಕೆ.ಆರ್. ಮಹೇಶ್ ಒಡೆಯರ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಜನರು ತೀವ್ರ ಸಂಕಷ್ಟದಲ್ಲಿ ಸಿಕ್ಕಿದ್ದಾರೆ. ಅಧಿಕಾರಿಗಳು ಸಾಮಾನ್ಯ ಜನರನ್ನು ಕಚೇರಿಗೆ ಅಲೆದಾಡಿಸದೆ ಶೀಘ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಆಗ್ರಹಿಸಿದರು. ಸದಸ್ಯೆ ಅಮಿತಾ ಮುತ್ತಪ್ಪ ಮಾತನಾಡಿ, ಮಲೆನಾಡು ಭಾಗದಲ್ಲಿ ಕೊರೊನಾ ಭಯ ಕಾಡುತ್ತಿದೆ. ಆರೋಗ್ಯ ಇಲಾಖೆಯವರು ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ ಮಲೆನಾಡು ಭಾಗಕ್ಕೆ ವಿಶೇಷ ಅನುದಾನ ತಂದು ಮೂಡಿಗೆರೆಯ ಎಂ.ಜೆ. ಎಂ. ಆಸ್ಪತ್ರೆಗೆ ಮತ್ತುಗೋಣಿಬೀಡು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇನಷ್ಟು ಅಭಿವೃದ್ಧಿಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಟ್ಟಡ ಬಾಡಿಗೆ ಇರುವ ಕಚೇರಿಗಳ ಬಾಡಿಗೆ ಪರಿಷ್ಕರಿಸಿ 20-21ನೇ ಸಾಲಿನ ವಿವಿಧ ಇಲಾಖೆಯ ಕ್ರಿಯಾ ಯೋಜನೆಗೆ ಸಭೆ ಅನುಮೋದನೆ ನೀಡಿತು. ಸಭೆಯಲ್ಲಿ ಸದಸ್ಯರಾದ ಜಸಂತಾ ಅನಿಲ್ ಕುಮಾರ್, ಚಂದ್ರಮ್ಮ, ಹಿರಿಗಯ್ಯ ಇದ್ದರು.