Advertisement

ಹುಟ್ಟು-ಸಾವು ನಮ್ಮದಲ್ಲ, ಬದುಕು ನಮ್ಮದು

04:04 PM Jul 15, 2019 | Naveen |

ಚಿಕ್ಕಮಗಳೂರು: ಹುಟ್ಟು, ಸಾವು ನಮ್ಮದಲ್ಲ. ಆದರೆ, ಬದುಕು ನಮ್ಮದು. ಆ ಬದುಕನ್ನು ಸಾಯಿಸಬಾರದು ಎಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಿರೇಮಗಳೂರು ಸಂಘದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯ ತನಕ ಹೆಂಡದ ಸೀಸೆ ಹಿಡಿಯುತ್ತಿದ್ದ ಕೈಗಳು ಇನ್ನು ಮುಂದೆ ಹೆಂಡತಿ ಕೈ ಹಿಡಿದು ಸಂಸಾರ ಮುನ್ನಡೆಸಬೇಕು. ಮಕ್ಕಳನ್ನು ಗುರಿ ಮುಟ್ಟಿಸಬೇಕು. ಮದ್ಯ ಸೇವನೆ ಬಿಡುವುದು ಕಷ್ಟವೇನಲ್ಲ. ಇಷ್ಟಪಟ್ಟು ಬಿಟ್ಟರೆ ಎಲ್ಲವೂ ಸಾಧ್ಯ. ಕುಟುಂಬವನ್ನು ಚೆನ್ನಾಗಿ ಇಟ್ಟುಕೊಳ್ಳಿ ಬದುಕು ಹಸನ್ಮುಖವಾಗಿರಲಿ. ತಾಳ ತಪ್ಪಿದರೆ ಸಂಗೀತ ಕೆಡುತ್ತದೆ. ತಾಳ್ಮೆ ತಪ್ಪಿದರೆ ಸಂಸಾರ ಕೆಡುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಮುಂದೆ ಹೋಗಿ. ಮತ್ತೆ ಯಾವುದೇ ಕಾರಣಕ್ಕೂ ದುಶ್ಚಟಕ್ಕೆ ಬಲಿಯಾಗದಿರಿ ಎಂದು ಶಿಬಿರಾರ್ಥಿಗಳಿಗೆ ಮದ್ಯ ವರ್ಜನದ ಬಗ್ಗೆ ಪ್ರಮಾಣ ವಚನ ಬೋಧಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪ್ರಕಾಶ್‌ರಾವ್‌ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಇಲ್ಲಿಯವರೆಗೆ 1368 ಮದ್ಯ ವರ್ಜನ ಶಿಬಿರಗಳು ನಡೆದಿವೆ. ಒಂದೊಂದು ಶಿಬಿರದಲ್ಲಿ 50 ರಿಂದ 60 ಮಂದಿ ಭಾಗವಹಿಸಿದ್ದಾರೆ. ಒಬ್ಬೊಬ್ಬರು ಮದ್ಯಕ್ಕಾಗಿ ಒಂದು ದಿನಕ್ಕೆ ಕನಿಷ್ಠ 100 ರೂ. ವಿನಿಯೋಗಿಸಿದ್ದು ಇಲ್ಲಿಯವರೆಗೆ ಆರೇಳು ಕೋಟಿ ರೂ. ಗಳಾಗುತ್ತವೆ. ದೇಶದಲ್ಲಿ ಕುಡಿಯಲಿಕ್ಕೆ ಖರ್ಚು ಮಾಡುವ ಹಣ ಲೆಕ್ಕ ಹಾಕಿದರೆ ದೇಶವನ್ನು ಬಡತನ ಮುಕ್ತವಾಗಿ ಮಾಡಬಹುದೇನೋ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಮದ್ಯ ಸೇವನೆ ಚಟಕ್ಕೆ ಬಿದ್ದು ಅನೇಕ ಕುಟುಂಬಗಳು ಇಂದಿಗೂ ಬಡತನ ಅನುಭವಿಸುತ್ತಿವೆ. ಕುಡಿತದಿಂದ ಹೊರಬಂದು ನವ ಜೀವನ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಪೊಲೀಸ್‌ ಅಧಿಕಾರಿ ರಕ್ಷಿತ್‌ ಮಾತನಾಡಿ, ಮದ್ಯವ್ಯಸನದಿಂದ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಸಾಮಾಜಿಕ ತುಳಿತಕ್ಕೆ ಒಳಗಾಗಬೇಕಾಗುತ್ತದೆ. ಜತೆಗೆ ದಿನದಿಂದ ದಿನಕ್ಕೆ ಆರೋಗ್ಯವೂ ಕೂಡ ಸಂಪೂರ್ಣ ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ಮತ್ತೆ ಮದ್ಯದ ಕಡೆ ಮುಖ ಮಾಡದೆ ಹೊಸ ಜೀವನ ಕಂಡುಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

Advertisement

ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಸನ್‌ಬಾವ ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಿ ಬಾ ಸದನದ ಕೌಟುಂಬಿಕ ಸಲಹಾ ಕೇಂದ್ರದ ಮೋಹಿನಿ ಸಿದ್ದೇಗೌಡ, ಜನಜಾಗೃತಿ ವೇದಿಕೆಯ ತೇಗೂರು ಜಗದೀಶ್‌, ನಿವೃತ್ತ ಸರ್ಜನ್‌ ಡಾ.ದೊಡ್ಡಮಲ್ಲಪ್ಪ, ಗ್ರಾಮಾಭಿವೃದ್ಧಿ ಯೋಜನೆಯ ಸಂಚಾಲಕಿ ಸುನಿತಾಪ್ರಭು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next