Advertisement

ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕೆ ಜನರ ಸಹಕಾರ ಅಗತ್ಯ

05:30 PM Feb 02, 2020 | Naveen |

ಚಿಕ್ಕಮಗಳೂರು: ಪ್ಲಾಸ್ಟಿಕ್‌ ಮುಕ್ತ ಗ್ರಾಮ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ.ಪ್ಲಾಸ್ಟಿಕ್‌ ಬಳಕೆಯ ಬದಲು ಕಾಗದ ಹಾಗೂ ಬಟ್ಟೆಯ ಕವರ್‌ ಬಳಸಿ ಸ್ವಚ್ಛ ಗ್ರಾಮವಾಗಿಸಲು ಗ್ರಾಮಸ್ಥರು ಕೈಜೋಡಿಸಬೇಕೆಂದು ಬಣಕಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ಸತೀಶ್‌ ಮತ್ತಿಕಟ್ಟೆ ಹೇಳಿದರು.

Advertisement

ಬಣಕಲ್‌ ಗ್ರಾಮ ಪಂಚಾಯತ್‌ ಆವರಣದಲ್ಲಿ ಪ್ಲಾಸ್ಟಿಕ್‌ ಮುಕ್ತ ಗ್ರಾಮದ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ಲಾಸ್ಟಿಕ್‌ ಮಣ್ಣಿನಲ್ಲಿ ಕರಗದ ವಸ್ತುವಾಗಿದ್ದು, ನಾವು ಉಪಯೋಗಿಸುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಸೆಯುವುದರಿಂದ ಅವು ಮಣ್ಣಿಗೆ ಸೇರಿ ಕರಗದೆ ಜಾನುವಾರುಗಳ ಹೊಟ್ಟೆ ಪಾಲಾಗುತ್ತಿವೆ. ಜಾನುವಾರುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಕರಗದೆ ಅವು ಸಾವಿನಂಚಿಗೆ ತಲುಪಿವೆ. ಇಂತಹ ವಿಷಯುಕ್ತ ಪ್ಲಾಸ್ಟಿಕ್‌ ತೊಲಗಿಸಿ ಸ್ವಚ್ಛ ಭಾರತದ ಕನಸು ನನಸಾಗಲು ಮುಂದಾಗಬೇಕೆಂದು ತಿಳಿಸಿದರು.

ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ದೇಶ ಸ್ವಚ್ಛವಾಗಲು ಗ್ರಾಮಗಳು ಮೊದಲು ಸ್ವಚ್ಛವಾಗಿರಬೇಕು. ವರ್ತಕರು ಕೂಡ ಪ್ಲಾಸ್ಟಿಕ್‌ ತೊಲಗಿಸಲು ಸಹಕರಿಸಬೇಕು. ಬಣಕಲ್‌ನಲ್ಲಿ ಫೆಬ್ರವರಿಯಿಂದ ಪ್ಲಾಸ್ಟಿಕ್‌ ಅನ್ನು ಸಂಪೂರ್ಣ ನಿಷೇಧಿಸಲು ವರ್ತಕರಿಗೆ ನೋಟಿಸ್‌ ನೀಡಿದ್ದು, ಇದಕ್ಕೆ ಸಹಕರಿಸಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ , ಮಾಜಿ ಅಧ್ಯಕ್ಷ ಬಿ.ಬಿ. ಸುರೇಶ್‌, ಸದಸ್ಯರಾದ ದಿಲ್‌ದಾರ್‌ ಬೇಗಂ, ಬಿ.ಕೆ ಸುರೇಶ್‌, ರಾಮಚಂದ್ರ, ಅನಿಲ್‌, ಪ್ರಶಾಂತಿ, ಮಯೂರ, ಭಾರತಿ, ಪ್ರಮೀಳಾ, ಲೆಕ್ಕಾಧಿಕಾರಿ ನಾಣಯ್ಯ, ಸಿಬ್ಬಂದಿ ಸುಧೀರ್‌, ಮಂಜುಳಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next