Advertisement

ಭೈರವ ಅರಸರ ಕಾಲದ ತೀರ್ಥಂಕರ ವಿಗ್ರಹ- ಶಾಸನ ಪತ್ತೆ

08:01 PM Nov 29, 2019 | Naveen |

ಚಿಕ್ಕಮಗಳೂರು: ಬಾಳೂರಿನ ಮನುಗೌಡ ಎಂಬುವವರ ತೋಟದಲ್ಲಿ ಜೈನ ಬಸದಿ ಕಟ್ಟಡದ ಅವಶೇಷ ಹಾಗೂ ಏಳು ಹೆಡೆ ನಾಗಾಭರಣ ಭೂಷಿತ ಶ್ರೀ ಪಾರ್ಶ್ವನಾಥ ವಿಗ್ರಹ, ಬಸದಿಯ ಬಾವಿ, ವಿಜಯನಗರ ಆರಂಭ ಕಾಲದ ಶಾಸನ ಹಾಗೂ ಕೋಟೆಯ ಅವಶೇಷಗಳನ್ನು ಹವ್ಯಾಸಿ ಇತಿಹಾಸ ಸಂಶೋಧಕ ಜಾವಳಿ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಎಚ್‌.ಆರ್‌ .ಪಾಂಡುರಂಗ ಪತ್ತೆ ಹಚ್ಚಿದ್ದಾರೆ.

Advertisement

10×10 ಅಳತೆ ಚಚ್ಚೌಕದ ಬಸದಿಯ ಕಲ್ಲಿನ ಅಡಿಪಾಯದ ಮೇಲೆ ಕಲ್ಲಿನ ಪಾದಪೀಠದ ಮೇಲೆ ಪ್ರತಿಷ್ಠಾಪಿಸಲ್ಪಟ್ಟ ಖಡ್ಗಾಸನ ಭಂಗಿಯ ಮತ್ತು ಮೂರು ಅಡಿ ಎತ್ತರ ಒಂದೂವರೆ ಅಡಿ ಅಗಲದ ಬಳಪದ ಕಲ್ಲಿನಿಂದ ನಿರ್ಮಿಸಿದ ಈ ಸುಂದರ ಸಪ್ತ ನಾಗಾಭರಣಭೂಷಿತ ವಿಗ್ರಹ ಜೈನ ಧರ್ಮದ 23ನೇ ತೀರ್ಥಂಕರ ಶ್ರೀ ಪಾರ್ಶ್ವನಾಥರದ್ದಾಗಿದೆ. ಬಸದಿಯ ಅವಶೇಷದ ಹತ್ತಿರ ದೊರೆತಿರುವ ಚಚ್ಚೌಕದಿಂದ ಸ್ಥಳೀಯ ಕಲ್ಲಿನಿಂದ ನಿರ್ಮಿಸಲ್ಪಟ್ಟ ಸೋಪಾನದ ಬಾವಿ ಬಸದಿಯ ಬಾವಿ ಎಂದು ಸ್ಥಳೀಯರಿಂದ ಕರೆಯಲ್ಪಡುತ್ತಿದ್ದು, ಈ ಬಾವಿ ಬಸದಿಯ ಅಭಿಷೇಕ ಜಲದ ಬಾವಿ ಆಗಿರಬಹುದು ಎಂದು ಸಂಶೋಧಕ ಪಾಂಡುರಂಗ ತಿಳಿಸಿದ್ದಾರೆ.

ಬಸದಿಯ ಕೆಳ ಭಾಗದಲ್ಲಿ ವಿಜಯನಗರ ಆರಂಭ ಕಾಲದ ಲಿಪಿ ಹೊಂದಿದ 25
ಸಾಲಿನ ಜೈನ ದಾನ ಶಾಸನವಿದ್ದು, ಬಸದಿಯ ನಿರ್ಮಾಣಕ್ಕೆ ಸಂಬಂಧಿಸಿರಬಹುದಾದ ಈ ಶಾಸನದ ಅಕ್ಷರ ಅಸ್ಪಷ್ಟವಾಗಿದ್ದು, ಅಧ್ಯಯನಕ್ಕೆ ಒಳಪಡಿಸಲಾಗಿದೆ. ಬಸದಿಯ ಸುತ್ತ ದೊರೆತಿರುವ ಸ್ಥಳೀಯ ಕಲ್ಲಿನ ಕೋಟೆಯಂತಹ ಕಲ್ಲಿನ ರಚನೆ ಬಹುಶಃ ವಿಜಯನಗರ ಸಾಮ್ರಾಜ್ಯದ ಮಹಾಮಂಡಲೇಶ್ವರರಾಗಿ ಕಳಸ ಕಾರ್ಕಳ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಭೈರವ ಅರಸರ ಪರವಾಗಿ 13-14ನೇ ಶತಮಾನದಲ್ಲಿ ಭಾಳೂರು ನಾಡಿನಲ್ಲಿ ಆಡಳಿತ ನಡೆಸುತ್ತಿದ್ದ ಜಿನ ಭಕ್ತರಾದ ನಾಡ ಹೆಗ್ಗಡೆಯವರ ಅರಮನೆಯ ರಕ್ಷಣಾ ಕೋಟೆಯಾಗಿದೆ. ಈ ಪಾರ್ಶ್ವನಾಥ ಬಸದಿ ಅವರ ದಿನನಿತ್ಯದ ಪೂಜೆಯ ಅರಮನೆ ಬಸದಿಯಾಗಿದ್ದಿರಬೇಕು ಎಂದು ಪಾಂಡುರಂಗ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next