Advertisement

ಬಲಿಷ್ಠ ಭಾರತ ಕಟ್ಟಲು ಮುಂದಾಗಿ

11:39 AM Aug 16, 2019 | Naveen |

ಚಿಕ್ಕಮಗಳೂರು: ಸಮಗ್ರತೆ, ಏಕತೆಯಿಂದ ಒಟ್ಟುಗೂಡಿ ಬಲಿಷ್ಠ ಭಾರತ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು.

Advertisement

ನಗರದ ಸುಭಾಷ್‌ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಜಿಲ್ಲೆಯ ಜನತೆಗೆ ಸಂದೇಶ ನೀಡಿದರು.

ದೇಶದಲ್ಲಿ ದೊಡ್ಡ ಯುವಶಕ್ತಿಯಿದ್ದು, ಹಿರಿಯರ ಮಾರ್ಗದರ್ಶನ ಪಡೆದು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕಿದೆ. ದೇಶದ್ರೋಹದ ಕೃತ್ಯ ನಡೆಸುವವರ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ನಾವು ಕೇವಲ ಅಕ್ಷರ ಜ್ಞಾನ ಪಡೆದರೆ ಸಾಲದು. ಸಂಸ್ಕಾರವನ್ನೂ ಮೈಗೂಡಿಸಿಕೊಳ್ಳಬೇಕು. ನಮ್ಮಲ್ಲಿರುವ ಎಲ್ಲಾ ಭೇದಭಾವ ಮರೆತು ನೈಜ ರಾಷ್ಟ್ರೀಯತೆಯ ಪ್ರತಿಪಾದಕರಾಗಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿಗಳು ದೇಶದ ಆದರ್ಶಶೀಲ ಪ್ರಜೆಗಳಾಗಿ ಬೆಳೆಯಬೇಕು. ನಮ್ಮ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಮಿಗಿಲಾಗಿ ಬೆಳೆಸಲು ಬದ್ಧರಾಗಬೇಕು. ರಾಷ್ಟ್ರದ ಗೌರವ ಹೆಚ್ಚಿಸುವ ಮೂಲಕ ದೇಶದ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

ನಾವು ನೆಮ್ಮದಿಯ ಬದುಕು ಸಾಗಿಸುತ್ತಿರುವುದಕ್ಕೆ ಕಾರಣ ನಮ್ಮ ಯೋಧರು. ಕಣ್ಣಲ್ಲಿ ಕಣ್ಣಿಟ್ಟು ಚಳಿ, ಮಳೆ, ಗಾಳಿ ನಡುವೆ ಹೋರಾಟ ಮಾಡುತ್ತಾ ನಮ್ಮನ್ನು ಕಾಪಾಡುತ್ತಿದ್ದಾರೆ. ಇಂತಹ ತ್ಯಾಗ, ಬಲಿದಾನ ಮಾಡುತ್ತಿರುವ ಯೋಧರ ಕುಟುಂಬಗಳಿಗೆ ಪ್ರೀತಿ, ವಿಶ್ವಾಸದಿಂದ ಧೈರ್ಯ, ಸ್ಥೈರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.

Advertisement

ಜಿಲ್ಲೆ ಅತಿವೃಷ್ಟಿಯಿಂದ ನಲುಗಿ ಹೋಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪ ತಾಲೂಕುಗಳಲ್ಲಿ ನಿರಂತರ ಮಳೆಯಿಂದ ಭೂಮಿ, ಬೆಟ್ಟ-ಗುಡ್ಡ ಕುಸಿದಿವೆ. ಸಾಕಷ್ಟು ಸಾವು-ನೋವು ಆಗಿವೆ. ಜನರ ಕಷ್ಟಕ್ಕೆ ಜಿಲ್ಲಾಡಳಿತ ಹಗಲು-ರಾತ್ರಿ ಎನ್ನದೆ ಶ್ರಮಿಸಿದೆ. ಹಾನಿಯಾದ ಪ್ರದೇಶಗಳ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ ಎಂದರು.

ದೇಶವಾಸಿಗಳ ಬದುಕು ಹಸನಾಗಲು ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕು. ಪ್ರತಿಯೊಬ್ಬ ಪ್ರಜೆಯೂ ಶಿಕ್ಷಣ ಪಡೆಯಬೇಕು. ಆರ್ಥಿಕವಾಗಿ ಸಬಲರಾಗಬೇಕು. ಧೈರ್ಯ, ತ್ಯಾಗ, ಸತ್ಯ, ಶಿಸ್ತು, ಐಕ್ಯತೆ, ಸೌಹಾರ್ದತೆ, ಹೃದಯ ವೈಶಾಲ್ಯತೆ, ಧಾರ್ಮಿಕ ಸಮನ್ವಯದ ಉಜ್ವಲ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳೋಣ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್.ಧರ್ಮೇಗೌಡ, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್.ಭೋಜೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಪಂ ಅಧ್ಯಕ್ಷ ನೆಟ್ಟನಕೆರೆಹಳ್ಳಿ ಜಯಣ್ಣ, ಜಿಪಂ ಸದಸ್ಯೆ ಜಸಿಂತಾ ಅನಿಲ್ಕುಮಾರ್‌, ತಾಪಂ ಸದಸ್ಯ ಈಶ್ವರಹಳ್ಳಿ ಮಹೇಶ್‌, ಜಿಪಂ ಸಿಇಒ ಎಸ್‌.ಅಶ್ವಥಿ, ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next