Advertisement

ತಗ್ಗಿದ ಮಳೆ; ಹೆಚ್ಚಿದ ಭೂಗುಡ್ಡ ಕುಸಿತ!

11:25 AM Aug 12, 2019 | Team Udayavani |

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಕಳೆದ 1 ವಾರದಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಭಾನುವಾರ ಸ್ವಲ್ಪ ಬಿಡುವು ನೀಡಿದೆ. ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಬೆಳಗಿನಿಂದ ಆಗಾಗ ಮಳೆಯಾಗುತ್ತಿತ್ತು. ಮಳೆ ನಿಂತರೂ ಸಹ ಹಾನಿ ಇನ್ನೂ ಮುಂದುವರಿದಿದೆ. ಭಾನುವಾರವೂ ಜಿಲ್ಲೆಯ ಕೆಲವೆಡೆಗಳಲ್ಲಿ ಗುಡ್ಡ ಕುಸಿತ ಪ್ರಕರಣಗಳು ವರದಿಯಾಗಿವೆ.

Advertisement

ಮೂಡಿಗೆರೆ ತಾಲೂಕು ಕಳಸ ಸಮೀಪದ ಕಲ್ಮಕ್ಕಿ ಹಾಗೂ ಕುಕ್ಕೋಡು ಗ್ರಾಮದಲ್ಲಿ ಗುಡ್ಡ ಕುಸಿದಿದೆ. ಚಿಕ್ಕಮಗಳೂರು ತಾಲೂಕಿನ ಸಿರಿವಾಸೆ ಸಮೀಪದ ಅಡಲುಗದ್ದೆ ಗ್ರಾಮದಲ್ಲಿ ಗುಡ್ಡವು ಮನೆ ಹಾಗೂ ಕಾಫಿ ತೋಟದ ಮೇಲೆ ಬಿದ್ದಿದೆ. ನಿತೀಶ್‌ ಹಾಗೂ ನಂದೀಶ್‌ ಎಂಬುವವರ ಮನೆಯ ಮೇಲೆ ಗುಡ್ಡ ಕುಸಿದಿದೆ. ಗುಡ್ಡ ಕುಸಿದರೂ ಅದೃಷ್ಟವಶಾತ್‌ ಕುಟುಂಬದವರಿಗೆ ಯಾವುದೇ ತೊಂದರೆಯಾಗದೆ ಪಾರಾಗಿದ್ದಾರೆ. ಗುಡ್ಡ ಕುಸಿತದಿಂದಾಗಿ ಸಿರಿವಾಸೆ ಅಡಲುಗದ್ದೆ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿದು ಮಣ್ಣು ಕಾಫಿ ತೋಟಕ್ಕೆ ಬಿದ್ದಿದೆ. ಗುಡ್ಡ ಕುಸಿತದಿಂದಾಗಿ 4 ಎಕರೆಗೂ ಹೆಚ್ಚು ತೋಟ ಕೊಚ್ಚಿ ಹೋಗಿದೆ. ಗುಡ್ಡ ಕುಸಿತದಿಂದಾಗಿ ಭಯಗೊಂಡಿರುವ ಅಡಲುಗದ್ದೆ ಗ್ರಾಮಸ್ಥರು ಗ್ರಾಮವನ್ನು ತೊರೆದಿದ್ದಾರೆ. ಅಡಲುಗದ್ದೆ ಗ್ರಾಮಸ್ಥರಿಗಾಗಿ ಜಿಲ್ಲಾಡಳಿತವು ಸಿರಿವಾಸೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರಾಶ್ರಿತರ ಕೇಂದ್ರ ತೆರೆದಿದ್ದು, ಗ್ರಾಮಸ್ಥರು ಅಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಕಳಸ ಸಮೀಪದ ಜಕ್ಕಣ್ಣ ಗ್ರಾಮದಲ್ಲಿ 100ಕ್ಕೂ ಹೆಚ್ಚು ಗ್ರಾಮಸ್ಥರು ಇದ್ದಾರೆ. ಸತತ ಮಳೆಯಿಂದಾಗಿ ಭದ್ರಾ ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಇಡೀ ಗ್ರಾಮವನ್ನು ನದಿಯ ನೀರು ಆವರಿಸಿದೆ. ಸದ್ಯಕ್ಕೆ ಗ್ರಾಮಸ್ಥರುಗಳಿಗೆ ಕಾಫಿ ಎಸ್ಟೇಟ್ ಒಂದರ ಮಾಲೀಕ ವಿಜಯೇಂದ್ರ ಆಶ್ರಯ ನೀಡಿದ್ದಾರೆ. ಕೂಡಲೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸುತ್ತಿದ್ದಾರೆ.

ಮೂಡಿಗೆರೆ ತಾಲೂಕಿನ ಆಲೆಖಾನ್‌ ಹೊರಟ್ಟಿ ಗ್ರಾಮದಲ್ಲಿ ಸಿಲುಕಿದ್ದ 76 ಜನರನ್ನು ಯೋಧರ ತಂಡ ಭಾನುವಾರ ರಕ್ಷಿಸಿದೆಯಾದರೂ ಇನ್ನೂ ನೂರಾರು ಜನ ಬೇರೆ ಬೇರೆ ಗ್ರಾಮಗಳಲ್ಲಿ ನಡಗದ್ದೆಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸಲು ಈವರೆಗೂ ಸಾಧ್ಯವಾಗಿಲ್ಲ. ತಾಲೂಕಿನ ಹಿರೇಬೈಲು, ಇಡಕಣಿ ಹಾಗೂ ದುರ್ಗದಹಳ್ಳಿ ಗ್ರಾಮಗಳಲ್ಲಿ ನಡುಗದ್ದೆಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಜಿಲ್ಲಾಡಳಿತವು ಹೆಲಿಕಾಪ್ಟರ್‌ನ್ನು ಕರೆಸಿತ್ತು. ಭಾನುವಾರ ಬೆಳಗ್ಗೆ ಈ ಪ್ರದೇಶಗಳಿಗೆ ತೆರಳಿದ ಹೆಲಿಕಾಪ್ಟರ್‌ ಹವಾಮಾನ ವೈಪರೀತ್ಯದಿಂದಾಗಿ ಇಳಿಸಲು ಸಾಧ್ಯವಾಗದೆ ವಾಪಸ್ಸಾಗಿದೆ. ಈ ಗ್ರಾಮಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಇನ್ನೂ ಸಾಧ್ಯವಾಗಿಲ್ಲ. ಉಳಿದಂತೆ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳಲ್ಲಿ ತುಂಗಾ, ಭದ್ರಾ ನದಿಗಳ ನೀರು ಇನ್ನೂ ಉಕ್ಕಿ ಹರಿಯುತ್ತಿದೆ. ಈಗಲೂ ಸಹ ಮಲೆನಾಡು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಮಳೆಯಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next