ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲ ಕೆರೆಕಟ್ಟೆಗಳೂ ತುಂಬಿ ಕೋಡಿ ಬೀಳುತ್ತಿವೆ. ಮಂಗಳವಾರ ರಾತ್ರಿಯೂ ಜಿಲ್ಲೆಯ ವಿವಿಧೆಡೆಗಳಲ್ಲಿ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮಾಗಡಿ ಕೆರೆ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತುಂಬಿ ಕೋಡಿ ಬಿದ್ದಿದೆ. ಅದೇ ರೀತಿ, ಜಿಲ್ಲೆಯ ಬಯಲು ಭಾಗಗಳ ಹಲವು ಕೆರೆಗಳು ಬಹಳ ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿವೆ.
ತಾಲೂಕಿನ ಉಜ್ಜಿನಿ- ಬಿದರೆಯಲ್ಲಿ ನೀರು ಉಕ್ಕಿ ಹರಿದ ಹಿನ್ನೆಲೆಯಲ್ಲಿ ಭತ್ತದ ಗದ್ದೆಗಳು ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ. ನಗರದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮುಖ್ಯ ಕಾಲುವೆಗಳಲ್ಲಿ ಕಸ-ಕಡ್ಡಿಗಳು ತುಂಬಿ ಕಟ್ಟಿಕೊಂಡಿದ್ದನ್ನು ಜನರೇ ನಿಂತು ಜೆಸಿಬಿ ಮೂಲಕ ತೆರವುಗೊಳಿಸಿದರು.
ರಾಮನಹಳ್ಳಿ -ಗೌರಿ ಕಾಲುವೆಯಲ್ಲಿ ಹತ್ತಾರು ಮೀಟರ್ ಉದ್ದಕ್ಕೂ ಜೊಂಡು ಹುಲ್ಲು ಬೆಳೆದಿದ್ದರಿಂದ ಕಸ-ಕಡ್ಡಿಗಳು ಸೇರಿ ಕಟ್ಟಿಕೊಂಡಿತ್ತು. ಇದರಿಂದಾಗಿ ಅಕ್ಕಪಕ್ಕದ ಮನೆಗಳಿಗೆ ಕಾಲುವೆಯ ನೀರು ನುಗ್ಗಿ ಜನ ಪರದಾಡುವ ಸ್ಥಿತಿ ತಲೆದೋರಿತ್ತು.
ಮನೆಗಳಲ್ಲದೆ ಹಿಟ್ಟಿನ ಗಿರಣಿ ಸೇರಿದಂತೆ ರಸ್ತೆಗಳು ಸಹ ಜಲಾವೃತವಾಗಿ ಜಲಚರಗಳನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರಲ್ಲದೆ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನೀರು ಇಳಿಮುಖವಾದ ನಂತರ ಸ್ಥಳೀಯ ಎಪಿಎಂಸಿ ವರ್ತಕ ನಾಗರಾಜ್ ಆಸಕ್ತಿ ವಹಿಸಿ ತಮ್ಮ ಸ್ವಂತ ಹಣದಲ್ಲಿ ಜೆಸಿಬಿ ಮೂಲಕ ಜೊಂಡು ಹುಲ್ಲನ್ನು ತೆಗೆಸಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿದೆ.
ಸೇತುವೆ ಅವೈಜ್ಞಾನಿಕವಾಗಿರುವ ಕಾರಣ ಧಾರಾಕಾರ ಮಳೆ ಬಂದ ಸಂದರ್ಭದಲ್ಲಿ ಜೊಂಡು ಹುಲ್ಲು ಅಡಚಣೆಯಾಗಿ ಕಟ್ಟಿಕೊಳ್ಳುತ್ತಲೇ ಇದೆ. ಹೀಗಾಗಿ ಮಳೆ ಬಂದಾಕ್ಷಣ ಅಕ್ಕಪಕ್ಕದ ಮನೆಯವರು ಆತಂಕಗೊಳ್ಳುವುದು ಸಹಜವಾಗಿದೆ. ನಗರ ಹಾಗೂ ತಾಲೂಕಿನಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಂಡಿಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಹೊಲಗದ್ದೆಗಳು ಕೆರೆ ಕೋಡಿಯ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ರೂ. ಮೌಲ್ಯದ ತರಕಾರಿ ಬೆಳೆಗಳು ನೀರು ಪಾಲಾಗಿವೆ.
ತಾಲೂಕಿನ ಬೊಮ್ಮಕಟ್ಟೆಕೆರೆ ಕೋಡಿ ಬಿದ್ದು ನೀರು ರಭಸದಿಂದ ನುಗ್ಗಿದ ಕಾರಣ ಬಂಡಿಹಳ್ಳಿಯ ವಗರಕಟ್ಟೆಕೆರೆ ತುಂಬಿ ಕೋಡಿ ಬಿದ್ದಿದ್ದರಿಂದ ಈ ಅಚ್ಚುಕಟ್ಟು ಪ್ರದೇಶದ ತೋಟ, ಹೊಲ, ಗದ್ದೆಗಳು ಜಲಾವೃತವಾಗಿ ತರಕಾರಿ ಬೆಳೆಗಳು ನಾಶವಾಗಿವೆ. ಇದರೊಂದಿಗೆ ಕುರುವಂಗಿಯ ದೊಡ್ಡಕೆರೆ ಸಹ ತುಂಬಿದೆ. ಮಳೆ ಇದೇ ರೀತಿ ಮುಂದುವರಿದು ಈಚಲುಕೆರೆ ಕೋಡಿ ಬಿದ್ದರೆ ಆ ನೀರು ಈ ಭಾಗದಲ್ಲೇ ಹರಿಯಲಿದೆ. ಆಗ ಮತ್ತಷ್ಟು ರೈತರಿಗೆ ತೀವ್ರ ಸಂಕಷ್ಟ ಎದುರಾಗುವ ಸಂಭವವಿದೆ.
ಈ ಭಾಗದ ರೈತರು ಬಹು ನಿರೀಕ್ಷೆಯೊಂದಿಗೆ ಬೆಳೆದಿದ್ದ ಬೀನ್ಸ್, ನವಿಲುಕೋಸು, ಮೂಲಂಗಿ, ಬೀಟ್‌ರೂಟ್, ಶುಂಠಿ, ಬಟಾಣಿ, ಟೊಮೆಟೋ ಬೆಳೆಗಳು ನೀರಿನಲ್ಲಿ
ಮುಳುಗಿ ಕೆಲವು ಕೊಳೆತು ಹೋಗಿದ್ದರೆ, ತಿಂಗಳಿಂದ ಬೆಳೆದ ಕೆಲವು ಗಿಡಗಳು ಸಂಪೂರ್ಣ ನೀರು ಪಾಲಾಗಿವೆ.
ಈ ಬಾರಿ ಸುರಿದ ಮಳೆಯಿಂದಾಗಿ ಗ್ರಾಮದ ಚಂದ್ರಪ್ಪ, ಹಾಲೇಶ, ಹರೀಶ, ಕುಮಾರ, ಶೇಖರಪ್ಪ, ನಂಜುಂಡಪ್ಪ, ಬಾಗೇಗೌಡ, ಧನಂಜಯ, ಮಹೇಶ್ ಸೇರಿದಂತೆ ಹತ್ತಾರು ರೈತರ ನೂರಾರು ಎಕರೆ ಬೆಳೆ ಹಾನಿಯಾಗಿದೆ.