Advertisement

ಅರಣ್ಯ ಭೂಮಿ ಬಿಟ್ಟು ಕದಲದ ನಿವೇಶನ ರಹಿತರು!

01:29 PM Dec 04, 2019 | Naveen |

ಚಿಕ್ಕಮಗಳೂರು: ಅರಿಶಿನಗುಪ್ಪೆ ಸಮೀಪದ ಲಕ್ಷ್ಮೀಪುರದ ನಿವೇಶನ ರಹಿತರನ್ನು ಅರಣ್ಯ ಭೂಮಿಯಿಂದ ತೆರವುಗೊಳಿಸುವ ಕಾರ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

Advertisement

ಗ್ರಾಮದ 60ಕ್ಕೂ ಹೆಚ್ಚು ಮಂದಿ ದಲಿತರು ತಮಗೆ ಭೂಮಿ ನೀಡದೇ ಇರುವುದಕ್ಕೆ ಬೇಸತ್ತು ಲಕ್ಷ್ಮೀಪುರ ತುರ್ಚೆ ಗುಡ್ಡದ ಸರ್ವೆ ನಂಬರ್‌ 52ರಲ್ಲಿ ಅಧಿಸೂಚಿತ ಅರಣ್ಯ ಎಂದು ಘೋಷಿತವಾಗಿರುವ ಪ್ರದೇಶದಲ್ಲಿ ಗುಡಾರ ಹಾಕಿಕೊಂಡು, ಅಂಬೇಡ್ಕರ್‌ ಪ್ರತಿಮೆ ಇಟ್ಟು, ಭೂಮಿ ನೀಡುವವರೆಗೂ ಹೊರಬರುವುದಿಲ್ಲವೆಂದು ಧರಣಿ ಆರಂಭಿಸಿದ್ದರು.

ಸೋಮವಾರ ಅಧಿಕಾರಿಗಳು ನಡೆಸಿದ ಸಂಧಾನ ಫಲ ನೀಡಲಿಲ್ಲ. ಮಂಗಳವಾರ ಸಹ ಅಲ್ಲಿಗೆ ತೆರಳಿ ಅವರನ್ನು ಅರಣ್ಯ ಭೂಮಿಯಲ್ಲಿ ಜಮೀನು ಮಂಜೂರು ಸಾಧ್ಯವಿಲ್ಲವೆಂದು ತಿಳಿಸಿದರೂ ಅಲ್ಲಿಂದ ಹೊರಬರಲು ಒಪ್ಪಲಿಲ್ಲ. ಮಂಗಳವಾರ ಪ್ರತಿಭಟನಾನಿರತರು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಊದಿನಕಡ್ಡಿ ಬೆಳಗಿ ಪ್ರಾರ್ಥನೆ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂಬಂಧ ಬುಧವಾರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಈ ಪ್ರದೇಶ ಅಧಿಸೂಚಿತ ಅರಣ್ಯವೆಂದು ಕಾಯ್ದೆ 4ರಂತೆ ಘೋಷಿತವಾಗಿರುವುದರಿಂದ ಅದನ್ನು ಮಂಜೂರು ಮಾಡಲು ಸಾಧ್ಯವಿಲ್ಲವೆಂದು ತಿಳಿಸುವ ಸಂಭವವಿದೆ.

ಅರಣ್ಯ ಇಲಾಖೆ ಈಗಾಗಲೇ 15 ಮಂದಿಯ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಿದೆ. ಆದರೆ, ಈವರೆಗೂ ಒತ್ತುವರಿ ಮಾಡಿದ ಆರೋಪದ ಮೇಲೆ ಯಾರನ್ನೂ ಬಂಧಿಸಿಲ್ಲ ಹಾಗೂ ಬಲವಂತವಾಗಿ ತೆರವುಗೊಳಿಸುವ ಕಾರ್ಯಕ್ಕೂ ಮುಂದಾಗಿಲ್ಲ.

Advertisement

ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಈ ಭೂಮಿ ಅರಣ್ಯ ಇಲಾಖೆಗೆ ಸೇರಿರುವುದರಿಂದ ಹಾಗೂ ಒಮ್ಮೆ ಇದು ಅಧಿಸೂಚಿತ ಅರಣ್ಯ ಎಂದು ಕಾಯ್ದೆ 4ರ ಅಡಿ ಘೋಷಿತವಾಗಿದ್ದಲ್ಲಿ, ಅದನ್ನು ಮಂಜೂರು ಮಾಡುವ ಅಧಿಕಾರ ಯಾರಿಗೂ ಇಲ್ಲ. ಹಾಗಾಗಿ, ಸ್ಥಳಕ್ಕೆ ತಹಶೀಲ್ದಾರರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತೆರಳಿ ತಿಳಿಸಿದ್ದಾರೆ.

ಅರಣ್ಯಕ್ಕೆ ಸೇರಿದ ಭೂಮಿಯನ್ನು ಎಷ್ಟೇ ದಿನ ಅಲ್ಲಿ ಕುಳಿತರೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಬಂದು ಮಾತನಾಡಿದಲ್ಲಿ ಅವರಿಗೆ ಕಾನೂನನ್ನು ವಿವರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next