Advertisement
ಈ ಕುರಿತು ಹೇಳಿಕೆ ನೀಡಿರುವ ಭದ್ರಾ ವೈಲ್ಡ್ಲೈಫ್ ಕನ್ಸ್‌ರವೇಶನ್ ಟ್ರಸ್ಟ್‌ನ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ. ವೀರೇಶ್, ಕೊಪ್ಪ ವಿಭಾಗದ ಕೂಸುಗಲ್, ಮೇಗರಮಕ್ಕಿ, ಬಸವನಕೋಟೆ ಅರಣ್ಯಗಳಲ್ಲಿ ಸಣ್ಣ ಹಾಗೂ ದೊಡ್ಡ ಬಿದಿರುಗಳನ್ನು ತೆಗೆಯುತ್ತಿದ್ದು, ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ನಾಯಕನ ಹಟ್ಟಿಯ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಸೇರಿದಂತೆ ಮೇದರರಿಗೆ ಅವರ ಕಸುಬಿಗಾಗಿ ನೀಡಲೆಂದು ಈ ಬಿದಿರನ್ನು ಕಡಿಯಲು ಇಲಾಖೆ ಸಮ್ಮತಿಸಿದೆ ಎಂದಿದ್ದಾರೆ.
Related Articles
Advertisement
ಬಿದಿರನ್ನು ನೀಡುವಾಗ ಮೇದಾರ ಸಂಘಗಳ ಪೂರ್ಣ ವಿವರವನ್ನಾಗಲೀ, ಅವುಗಳು ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಮತ್ತು ಅಲ್ಲಿಯ ಅವಶ್ಯಕತೆಯಿರುವ ಬಿದಿರಿನ ಪ್ರಮಾಣ ಸೇರಿದಂತೆ ಯಾವುದೇ ವಿವರಗಳನ್ನು ಅರಣ್ಯ ಇಲಾಖೆ ಸಂಗ್ರಹಿಸಿದಂತೆ ಕಂಡುಬರುತ್ತಿಲ್ಲ. ಪ್ರಾದೇಶಿಕ ಅಧಿಕಾರಸ್ಥ ಸಮಿತಿ ಮಾರ್ಚ್ 7 ರಂದು ನಡೆದ ಸಭೆಯಲ್ಲಿ ಬಿದಿರು ಕಟಾವಣೆಗೆ ಅನುಮತಿ ನೀಡಿದೆ. ಒಟ್ಟು 53,000 ಬಿದಿರು ಕತ್ತರಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ 1000 ಬಿದಿರನ್ನು ಕೊಪ್ಪ ವಿಭಾಗದ, ಚಿಕ್ಕಗ್ರಹಾರ ವಲಯದಲ್ಲಿ ಇಲಾಖೆ ಮುಖಾಂತರ ಕಡಿದು ನಂತರ ಅದನ್ನು ನ.ರ.ಪುರದ ನಾಟ ಸಂಗ್ರಾಹಲಯಕ್ಕೆ ಸಾಗಿಸಿ ಅಲ್ಲಿಂದ ಅರ್ಜಿದಾರರಿಗೆ ವಿತರಣೆ ಮಾಡಬೇಕು. ಆದರೆ ಆ ರೀತಿ ಮಾಡದೇ ಗುತ್ತಿಗೆದಾರರೆ ಕಡಿದು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಮೇದಾರು ಜನಾಂಗಕ್ಕೆ ಬಿದಿರನ್ನು ಅವರ ಕುಲ ಕಸುಬಿಗಾಗಿ ಅವಶ್ಯಕತೆಗೆ ತಕ್ಕಂತೆ ನೀಡಲು ನಮ್ಮ ವಿರೋಧವಿಲ್ಲ. ಆದರೆ, ಅವರ ಹೆಸರಿನಲ್ಲಿ ವಾಣಿಜ್ಯ ಮಾರುಕಟ್ಟೆಗೆ ಅಧಿಕ ಲಾಭಕ್ಕಾಗಿ ನೈಸರ್ಗಿಕ ಅರಣ್ಯ ಸಂಪತ್ತನ್ನು ನಾಶ ಮಾಡಲು ಇಲಾಖೆಯೇ ಯಾವುದೇ ರೀತಿಯ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳದೇ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಕೇಳಬೇಕಾಗಿದೆ ಎಂದಿದ್ದಾರೆ.
ಈಗಾಗಲೇ ಮಲೆನಾಡಿನಲ್ಲಿ ಬಿದಿರು ಚಿಗುರನ್ನು ಸಾಕಷ್ಟು ಇಷ್ಟಪಟ್ಟು ತಿನ್ನುವ ಆನೆಗಳು ಹಾಗೂ ಇತರೆ ಸಸ್ಯಹಾರಿ ಪ್ರಾಣಿಗಳಿಗೆ ಅರಣ್ಯ ಪ್ರದೇಶದಲ್ಲಿ ಸೂಕ್ತ ಪ್ರಮಾಣದಲ್ಲಿ ಆಹಾರ ಸಿಗದೇ ಮನುಷ್ಯ ಮತ್ತು ಪ್ರಾಣಿ ಸಂಘರ್ಷಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅರಣ್ಯದೊಳಗೆ ಬೆಳೆದಿರುವ ಬಿದಿರು ಕಡಿಯಲು ಅವಕಾಶ ನೀಡುವುದು ಈ ಸಂಘರ್ಷಕ್ಕೆ ಇಲಾಖೆಯೇ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆಯು ಉದ್ಭವಿಸಿದ್ದು, ಈ ಪ್ರಶ್ನೆಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಉತ್ತರಿಸಬೇಕಾಗಿದೆ ಎಂದಿದ್ದಾರೆ.
ರಕ್ಷಿತ ಮತ್ತು ರಾಜ್ಯ ಅರಣ್ಯಗಳಲ್ಲಿ ಬಿದಿರು ತೆಗೆಯುವ ಪದ್ಧತಿಯನ್ನು ಇಲಾಖೆ ತಕ್ಷಣ ನಿಲ್ಲಿಸಬೇಕಾಗಿದೆ. ಮೇದಾರರಿಗೆ ಅರಣ್ಯ ಇಲಾಖೆಯ ಅಂಗಗಳಾದ ಕೆ.ಎಫ್.ಡಿ.ಸಿ., ಕೆ.ಎಫ್.ಐ.ಡಿ.ಸಿ. ಹಾಗೂ ಸಾಮಾಜಿಕ ಅರಣ್ಯ ವಿಭಾಗಗಳು ಬಿದಿರನ್ನು ಬೆಳೆದು ನೀಡುವ ಆಲೋಚನೆ ಮಾಡುವ ಅನಿವಾರ್ಯತೆ ಇದೆ. ತಕ್ಷಣ ಕೊಪ್ಪ ವಿಭಾಗದಲ್ಲಿ ಬಿದಿರು ಕತ್ತರಿಸುವ ಆದೇಶವನ್ನು ಅರಣ್ಯ ಇಲಾಖೆ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.