ಚಿಕ್ಕಮಗಳೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ಐದು ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಅಜ್ಜಂಪುರ ತಾಲೂಕು ಶಿವನಿ ಗ್ರಾಮದ ರೈಲ್ವೇ ಸ್ಟೇಷನ್ ಬಳಿ ನಡೆದಿದೆ.
ಬಾಲಕಿಯ ಕೆನ್ನೆ ಹಾಗೂ ಮುಖದ ಮೇಲೆ ಗಾಯದ ಗುರುತುಗಳಿದ್ದು, ಕಿವಿಯಲ್ಲಿದ್ದ ಓಲೆ, ಕಾಲಿನಲ್ಲಿದ್ದ ಚೈನು ನಾಪತ್ತೆಯಾಗಿವೆ.
ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ಮಂಜುನಾಥ ಮತ್ತು ಮಂಗಳ ದಂಪತಿಯ ಐದು ವರ್ಷದ ಮಗಳು ಸಾವನ್ನಪ್ಪಿದ ಬಾಲಕಿ. ತಂದೆ ತಾಯಿ ಇಬ್ಬರೂ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದ್ದು, ತೆಂಗಿನಕಾಯಿ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ ಹಾಗೂ ಮಂಗಳ ದಂಪತಿಗಳು ಮಗುವಿಗೆ ಜ್ವರವಿದ್ದ ಹಿನ್ನೆಲೆ ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟಕ್ಕೆ ಬಂದ ವೇಳೆ ಮಗಳು ಮೃತಪಟ್ಟಿರುವುದು ತಿಳಿದಿದೆ.
ಬಾಲಕಿಯ ಸಾವು ಅನುಮಾನದಿಂದ ಕೂಡಿದ್ದು, ಸ್ಥಳಕ್ಕೆ ಅಜ್ಜಂಪುರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.