Advertisement

ಮಾವು ಭರಪೂರ ಫಸಲು ನಿರೀಕ್ಷೆ!

12:44 PM Apr 28, 2019 | Naveen |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಧಿಕ ಗಾಳಿ, ಆಲಿಕಲ್ಲು ಬೀಳದಿದ್ದರೆ ಈ ವರ್ಷ ಹಣ್ಣಿನ ರಾಜ ಮಾವಿನ ಬಂಪರ್‌ ಫಸಲನ್ನು ನಿರೀಕ್ಷಿಸಲಾಗಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 4244 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ತರೀಕೆರೆ ತಾಲೂಕಿನಲ್ಲಿ 2861 ಹೆಕ್ಟೇರ್‌, ಕಡೂರಿನಲ್ಲಿ 534 ಹೆಕ್ಟೇರ್‌, ಚಿಕ್ಕಮಗಳೂರು ತಾಲೂಕಿನಲ್ಲಿ 590 ಹೆಕ್ಟೇರ್‌ ಪ್ರದೇಶದಲ್ಲಿ ಮಾವನ್ನು ಬೆಳೆಯುತ್ತಿದ್ದಾರೆ. ಆಲ್ಪೋನ್ಸ್‌ ಮಲ್ಲಿಗೆ, ತೋತಾಪುರಿಯನ್ನು ಮುಖ್ಯವಾಗಿ ಈ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ.

ತರೀಕೆರೆ ತಾಲೂಕಿನ ಅಜ್ಜಂಪುರ, ಲಿಂಗದಹಳ್ಳಿ, ಅಮೃತಾಪುರ, ಕಸಬಾದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕಡೂರು ತಾಲೂಕಿನ ಕಸಬಾ ಹೋಬಳಿ, ತಂಗಲಿ, ಚಿಕ್ಕಮಗಳೂರು ತಾಲೂಕಿನ ಅಂಬಳೆ ಮತ್ತು ಲಕ್ಯಾ ಹೋಬಳಿಯಲ್ಲಿ ಮಾವು ಬೆಳೆಯಲಾಗುತ್ತಿದ್ದು, ಈ ವರ್ಷ ಮಾವಿನ ಹೂವು ಅಧಿಕವಾಗಿ ಬಿಟ್ಟಿರುವುದರಿಂದ ಹೆಚ್ಚಿನ ಫಸಲು ನಿರೀಕ್ಷಿಸಲು ಕಾರಣವಾಗಿದೆ.

ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಯೋಜನೆಯಡಿ 250 ರಿಂದ 300 ಹೆಕ್ಟೇರ್‌ ಪ್ರದೇಶದಲ್ಲಿ ಈ ಬೆಳೆಯನ್ನು 2006 ನೆಯ ಸಾಲಿನಿಂದ ವಿಸ್ತರಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಪ್ರದೇಶ ವಿಸ್ತರಣೆಗೆ ಒತ್ತು ನೀಡಲಾಗಿದೆ. 1 ಹೆಕ್ಟೇರ್‌ ಮಾವಿನ ಬೆಳೆಗೆ 7900 ರೂ. ಸಹಾಯಧನ ನೀಡಲಾಗುತ್ತಿದೆ. ತಾಲೂಕು ಪಂಚಾಯತ್‌ ವತಿಯಿಂದ 1 ಹೆಕ್ಟೇರ್‌ಗೆ 2 ಸಾವಿರ ರೂ. ಸಹಾಯಧನವನ್ನು ರೈತರು ಪಡೆದುಕೊಳ್ಳುತ್ತಿದ್ದಾರೆ.

ಈ ಹಿಂದೆ ಕಾರ್ಬೈಡ್‌ ಬೆಳೆಸಿ ಮಾವಿನಕಾಯಿಯನ್ನು ಬೇಗ ಹಣ್ಣು ಮಾಡಲಾಗುತ್ತಿತ್ತು. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಇಥಿಲಿನ್‌ ಬಳಸಿ ಹಣ್ಣು ಮಾಡುವಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆ. ಈ ರೀತಿ ಹಣ್ಣು ಮಾಡುವ ಒಂದು ಘಟಕಕ್ಕೆ 8 ಲಕ್ಷ ರೂ. ಸಹಾಯಧನ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಬಿ.ಲೋಹಿತ್‌ ಮಾಹಿತಿ ನೀಡಿದರು.

Advertisement

ಹಣ್ಣು ಮಾಗಿಸುವ(ಪಾಕ್‌ಹೌಸ್‌) ಘಟಕ ಸ್ಥಾಪಿಸುವ ಯೋಜನೆ ಕಳೆದ ವರ್ಷದಿಂದ ಜಾರಿಗೊಳಿಸಿದ್ದು, ರೈತರು ಕನಿಷ್ಠ 2 ಹೆಕ್ಟೇರ್‌ ಜಾಗ ಹೊಂದಿರಬೇಕು. ಈ ಘಟಕಕ್ಕೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಸ್ಥಾಪಿಸುವ ರೈತರು ಬೇರೆ ರೈತರಿಂದ ಮಾವು ಖರೀದಿಸುವ ಬಗ್ಗೆ ಒಪ್ಪಿಗೆ ಕರಾರು ಪತ್ರವನ್ನು ಮಾಡಿಕೊಂಡಿರಬೇಕು ಎಂದು ಮಾಹಿತಿ ನೀಡಿದರು.

ಮಾವಿನ ಹಣ್ಣನ್ನು ಸಂಗ್ರಹಿಸಿಡಲು ಗೋದಾಮು ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗಕ್ಕೆ ಶೇ.50 ಸಹಾಯಧನ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.90 ಸಹಾಯಧನ ನೀಡಲಾಗುತ್ತಿದೆ. ಮಾವು ಬೆಳೆಗಾರರ ಒಕ್ಕೂಟವನ್ನು ಸ್ಥಾಪಿಸಿಕೊಂಡರೆ ರೈತರು ಹೆಚ್ಚಿನ ಸವಲತ್ತನ್ನು ಪಡೆದುಕೊಳ್ಳಲು ಸಹಾಯವಾಗಲಿದೆ.

ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಕರಪತ್ರ ಮುದ್ರಿಸಿ ಹಂಚಲು ಯೋಚಿಸಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಮಾವು ಮೇಳ ನಡೆಸಲು ನಿರ್ಧರಿಸಿದ್ದು, ಅನುದಾನ ಬಿಡುಗಡೆಗೆ ಕೋರಲಾಗಿದೆ. ಅನುಮತಿ ದೊರೆತರೆ ಕಚೇರಿ ಆವರಣ, ಎಪಿಎಂಸಿ ಪ್ರಾಂಗಣ ಅಥವಾ ತರೀಕೆರೆಯಲ್ಲಿ ಮೇಳ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.

ತರೀಕೆರೆ ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರು ಸಂಘ ರಚಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ ತರಕಾರಿ ಬೆಳೆಯುವ ರೈತರು ಸಂಘ ಮಾಡಿಕೊಂಡಿದ್ದಾರೆ. ಈ ರೀತಿ ಸಂಘ ರಚಿಸಿಕೊಳ್ಳುವುದರಿಂದ ಇಲಾಖೆಯಿಂದ ದೊರೆಯುವ ಹೆಚ್ಚಿನ ಸವಲತ್ತುಗಳನ್ನು ನೀಡಲು ಸಾಧ್ಯವೆಂದು ನುಡಿದರು.

ತರೀಕೆರೆ ತಾಲೂಕಿನ ನಂದಿಹೊಸಳ್ಳಿಯ ಮಾವು ಬೆಳೆಗಾರ ಅಸ್ಲಾಂಖಾನ್‌ ಪತ್ರಿಕೆಯೊಂದಿಗೆ ಮಾತನಾಡಿ, ಮಾವಿನ ಚೇಣಿ ಮಾಡಿದವರು ಮತ್ತು ಈ ಬೆಳೆಯನ್ನೇ ನಂಬಿಕೊಂಡಿರುವವರು ನೆಲಹತ್ತಿ ಹೋಗಿದ್ದಾರೆಂದು ತಿಳಿಸಿ, ಈ ವರ್ಷ ಮಾವಿನ ತೆನೆಯೇ ಇಲ್ಲ. ದರ ಕಟ್ಕೊಂಡು ಏನು ಮಾಡಲು ಸಾಧ್ಯವೆಂದು ಪ್ರಶ್ನಿಸಿ, ಕಳೆದೆರಡು ವರ್ಷಗಳ ಹಿಂದೆ ಈ ಬೆಳೆಯಿಂದ ಯಾವ ಲಾಭವೂ ಆಗಲಿಲ್ಲ. ಕನಿಷ್ಠ ಪ್ರತಿ ಕೆ.ಜಿ.ಗೆ 30 ರೂ.ಗಳಾದರೂ ದೊರೆಯಬೇಕು. ಈ ಬಾರಿ ಸಗಟಾಗಿ 60 ರಿಂದ 80 ರೂ.ಕೆ.ಜಿ ಮಾವಿನಹಣ್ಣು ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾವು 100 ಎಕರೆಯಲ್ಲಿ 6 ಸಾವಿರ ಮಾವಿನ ಗಿಡಗಳನ್ನು ಬೆಳೆದಿದ್ದು, ಫಸಲು ಬಹಳ ಕಡಿಮೆ ಇದೆ. ನಾವೆ ಮಾವಿನ ಕಾಯಿಯನ್ನು ಕೊಯಲು ಮಾಡಿ ಮಾರಾಟ ಮಾಡುತ್ತಿದ್ದೇವೆ. ಚೇಣಿ ಮಾಡಲು ಮುಂದಾಗುತ್ತಿಲ್ಲ. ಮಾವಿನ ಹೂ ಬಿಟ್ಟಾಗ ಜಿಗಿ ಹುಳು ಬಾಧೆ, ಕಟಾವು ಸಂದರ್ಭದಲ್ಲಿ ನೊಣದ ಬಾಧೆ ಉಂಟಾಗುತ್ತಿದ್ದು, ಇದರ ನಿಯಂತ್ರಣ ಮಾಡದಿದ್ದರೆ ಬೆಳೆ ಸರ್ವನಾಶವಾಗುತ್ತದೆ. ಇದರ ಹತೋಟಿಗೆ ಸರ್ಕಾರ ಬಲೆ ಕೊಡಲು ಮುಂದಾಗಬೇಕೆಂದು ಮನವಿ ಮಾಡಿದರು.

ಈ ಹಿಂದೆ ಕಾರ್ಬೈಡ್‌ ಬೆಳೆಸಿ ಮಾವಿನಕಾಯಿಯನ್ನು ಬೇಗ ಹಣ್ಣು ಮಾಡಲಾಗುತ್ತಿತ್ತು. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಇಥಿಲಿನ್‌ ಬಳಸಿ ಹಣ್ಣು ಮಾಡುವಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆ. ಈ ರೀತಿ ಹಣ್ಣು ಮಾಡುವ ಒಂದು ಘಟಕಕ್ಕೆ 8 ಲಕ್ಷ ರೂ. ಸಹಾಯಧನ ನೀಡಲಾಗುವುದು.
ಎಂ.ಬಿ.ಲೋಹಿತ್‌,
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next