Advertisement

ಬನ್ನಿ ಮಕ್ಕಳೇ ಆಂಗ್ಲ ಮಾಧ್ಯಮ ಸರಕಾರಿ ಶಾಲೆಗೆ

12:37 PM May 29, 2019 | Naveen |

ಎಸ್‌.ಕೆ.ಲಕ್ಷ್ಮೀಪ್ರಸಾದ್‌
ಚಿಕ್ಕಮಗಳೂರು:
ಜಿಲ್ಲೆಯಾದ್ಯಂತ 20 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ನಾಲ್ಕು, ಕಡೂರು ವ್ಯಾಪ್ತಿಯಲ್ಲಿ ನಾಲ್ಕು, ಮೂಡಿಗೆರೆ ತಾಲೂಕಲ್ಲಿ ನಾಲ್ಕು, ಶೃಂಗೇರಿ ವ್ಯಾಪ್ತಿಯಲ್ಲಿ ನಾಲ್ಕು ಹಾಗೂ ತರೀಕೆರೆ ಭಾಗದಲ್ಲಿ ನಾಲ್ಕು ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗುತ್ತಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಪ್ರವೇಶಾತಿ ಆಗುವ ನಿರೀಕ್ಷೆ ಇದೆ. ಈಗಾಗಲೇ ಹಲವರು ಶಾಲೆಗೆ ಆಗಮಿಸಿ ಮಕ್ಕಳನ್ನು 1ನೇ ತರಗತಿಗೆ ಸೇರಿಸುವ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಈ ಶಾಲೆಗಳಲ್ಲಿ ಆಂಗ್ಲಮಾಧ್ಯಮ: ಚಿಕ್ಕಮಗಳೂರು ತಾಲೂಕಿನಲ್ಲಿ ನಗರದ ಬಸವನಹಳ್ಳಿ, ಹೌಸಿಂಗ್‌ ಬೋರ್ಡ್‌, ಕಳಸಾಪುರ, ಸಖರಾಯಪಟ್ಟಣ, ಕಡೂರು ತಾಲೂಕಿನ ಜಿಗಣೆಹಳ್ಳಿ, ಪಟ್ಟಣದ ಕೆ.ಎಂ.ರಸ್ತೆ ಶಾಲೆ, ಚೌಳಹಿರಿಯೂರು, ಪಂಚನಹಳ್ಳಿ, ಮೂಡಿಗೆರೆ ಕ್ಷೇತ್ರದ ಮಲ್ಲಂದೂರು, ಮಾಚಗೋಡನಹಳ್ಳಿ, ಪಟ್ಟಣದ ಜಿ.ಜೆ.ಸಿ., ಕಳಸ, ಶ‌ೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಪಟ್ಟಣದ ಜಿಎಂಎಚ್ಪಿಎಸ್‌, ನರಸಿಂಹರಾಜಪುರ ಪಟ್ಟಣದ ಜಿಎಂಎಚ್ಪಿಬಿಎಸ್‌, ವಿದ್ಯಾನಗರ, ಬೇಗಾರು, ತರೀಕೆರೆ ತಾಲೂಕಿನ ಲಿಂಗದಹಳ್ಳಿ, ರಂಗೇನಹಳ್ಳಿ, ಶಿವನಿ ಹಾಗೂ ತುದಿಪೇಟೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭವಾಗಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾತಿ ಪಡೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ. ಶಾಲಾ ದಾಖಲಾತಿ ಆಂದೋಲನವನ್ನು ಜಿಲ್ಲೆಯಾದ್ಯಂತ ನಡೆಸಲಾಗಿದ್ದು, ಈ ಬಾರಿ ಆಂದೋಲನದಲ್ಲಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಕುರಿತು ಪ್ರಚಾರ ಮಾಡಲಾಗಿದೆಯಲ್ಲದೆ, ಗ್ರಾಮ ಪಂಚಾಯತ್‌ ಕಚೇರಿ ಸೇರಿದಂತೆ ವಿವಿಧೆಡೆಗಳಲ್ಲಿ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನಿಡಲಾಗಿದೆ.

ಹೆಚ್ಚುವರಿ ಕೊಠಡಿ ಬೇಕಿಲ್ಲ: ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುವ ಸಂದರ್ಭದಲ್ಲಿ ಯಾವ ಶಾಲೆಗಳಲ್ಲಿ ಹೆಚ್ಚಿನ ಮಕ್ಕಳ ಸಂಖ್ಯೆ ಇದೆ ಎಂಬುದನ್ನು ಗುರುತಿಸಿ ಅದರೊಂದಿಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಹೆಚ್ಚುವರಿ ಕೊಠಡಿಗಳು ಇರುವುದನ್ನು ನೋಡಿ ಮಂಜೂರಾತಿ ನೀಡಲಾಗಿದೆ. ಹಾಗಾಗಿ ಹೆಚ್ಚುವರಿ ಕೊಠಡಿ ನಿರ್ಮಿಸುವ ಅವಶ್ಯಕತೆ ಈ ವರ್ಷ ಇಲ್ಲವಾಗಿದೆ. ಮುಂದಿನ ಶೈಕ್ಷಣಿಕ ವರ್ಷದೊಳಗಾಗಿ ಅಗತ್ಯವಿದ್ದರೆ ಹೆಚ್ಚುವರಿ ಕೊಠಡಿ ನಿರ್ಮಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Advertisement

ಶಿಕ್ಷಕರಿಗೆ ತರಬೇತಿ: ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡುವ ಶಿಕ್ಷಕರುಗಳಿಗೆ ಡಯೆಟ್‌ನಲ್ಲಿ 15 ದಿನಗಳ ತರಬೇತಿ ನೀಡಲಾಗಿದೆ. ಪ್ರತಿ ಶಾಲೆಯಿಂದ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಮುಂದಿನ ದಿನಗಳಲ್ಲಿ ಪುನಃ ತರಬೇತಿ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಪಠ್ಯ ಪುಸ್ತಕ ಬಂದಿಲ್ಲ: ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಈಗಾಗಲೇ ಪಠ್ಯ ಪುಸ್ತಕಗಳ ಸರಬರಾಜು ಮಾಡಲಾಗಿದೆ. ಆದರೆ ಆಂಗ್ಲ ಮಾಧ್ಯಮದ ಪಠ್ಯ ಪುಸ್ತಕಗಳು ಈವರೆಗೂ ಸರಬರಾಜಾಗಿಲ್ಲ. 1 ವಾರದೊಳಗಾಗಿ ಎಲ್ಲ ಶಾಲೆಗಳಿಗೂ ಪಠ್ಯ ಪುಸ್ತಕ ಸರಬರಾಜು ಮಾಡಲಾಗುವುದು. ಅಲ್ಲಿಯವರೆಗೂ ಪಠ್ಯೇತರ ಚಟುವಟಿಕೆಗಳನ್ನು ನಡೆಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ನೀಡಲಾಗುವುದು. ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಾಲು ಎಲ್ಲವನ್ನೂ ಈ ವಿದ್ಯಾರ್ಥಿಗಳಿಗೂ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಆಂಗ್ಲ ಮಾಧ್ಯಮ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲಾಗುತ್ತಾರೆ ಎಂಬ ವಿಶ್ವಾಸವಿದೆ. ಎಲ್ಲೆಡೆ ಹೆಚ್ಚಿನ ಪೋಷಕರು ವಿಚಾರಿಸುತ್ತಿದ್ದಾರೆ. ಈ ವರ್ಷ ಕೊಠಡಿಗಳು ಲಭ್ಯವಿರುವ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ದಾಖಲಾತಿ ಮೇ. 29ರಿಂದ ಆರಂಭವಾಗಲಿದೆ. ಆಂಗ್ಲ ಮಾಧ್ಯಮ ಶಾಲೆಗಳು ವಾರದ ನಂತರ ಆರಂಭಗೊಳ್ಳಲಿದೆ.
ಶರಶ್ಚಂದ್ರ,
ಕ್ಷೇತ್ರ ಶಿಕ್ಷಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next