Advertisement
ಹೊಳೆಕೂಡಿಗೆಯ ಬಾಸಮ್ಮ ಹಾಗೂ ರಮೇಶ ಅವರ ಎರಡು ತೋಟಗಳಲ್ಲಿ ಮೂರು ಕಾಡಾನೆಗಳು ಸಂಚರಿಸಿ ಬಾಳೆಗಿಡಗಳನ್ನು ತಿಂದು ನಾಶ ಮಾಡಿವೆ. ತೋಟಗಳಲ್ಲಿಯೇ ಲದ್ದಿ ಹಾಕಿ ಹೋಗಿವೆ. ಕಳೆದ ಕೆಲವು ದಿನಗಳ ಹಿಂದೆಯೂ ಈಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಮತ್ತೇ ಕಾಡಾನೆ ದಾಳಿ ಗ್ರಾಮದಲ್ಲಿ ಮುಂದುವರೆದಿದ್ದು ಗ್ರಾಮಸ್ಥರು ಬೆಳೆ ಕಳೆದುಕೊಂಡು ನಷ್ಟ ಅನುಭವಿಸುವಂತಾಗಿದೆ.
ಗ್ರಾಮೀಣ ಭಾಗದ ಬಣಕಲ್,ಗುತ್ತಿ,ದೇವರಮನೆ ಮತ್ತಿತರ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳವಿದೆ. ಹಳ್ಳಿಗಳಿಗೆ ಆಹಾರ ಹುಡುಕಿಕೊಂಡು ಕಾಡಾನೆಗಳು ಊರಿಗೆ ಬರುತ್ತಿದ್ದು ಬೆಳೆ ಹಾನಿ ಮಾಡಿ ರೈತರು ಕಂಗಾಲಾಗುತ್ತಿದ್ದಾರೆ. ಹಲವು ಕಡೆ ಕಾಡಾನೆ ಸಂಚಾರದಿಂದ ಗ್ರಾಮಸ್ಥರು ತೋಟದ ಕಾರ್ಮಿಕರು,ಶಾಲಾ ಮಕ್ಕಳು ಭಯ ಪಡುವಂತಾಗಿದೆ. ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗೆ ಓಡಿಸುವುದರ ಮುಖಾಂತರ ಅಥವಾ ಸ್ಥಳಾಂತರ ಮಾಡುವ ಮುಖಾಂತರ ಶಾಶ್ವತ ಪರಿಹಾರ ಒದಗಿಸಿ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣಬಾಳೂರು ಒತ್ತಾಯಿಸಿದ್ದಾರೆ.