ಚಿಕ್ಕಮಗಳೂರು: ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಜಿಲ್ಲೆಯಲ್ಲಿ ನಡೆಯುತ್ತಿರುವ 81 ಖನಿಜ ಮತ್ತು ಉಪಖನಿಜ ಗುತ್ತಿಗೆಯಿಂದ 2017ರಿಂದ 2019ರವರೆಗೆ 2.42 ಕೋಟಿ ರೂ. ರಾಜಧನ ವಸೂಲಿ ಮಾಡಿದೆ.
ಜಿಲ್ಲಾ ಪಂಚಾಯತ್ ಅಬ್ದುಲ್ನಜೀರ್‌ಸಾಬ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯಲ್ಲಿ ಮಾಹಿತಿ ನೀಡಿದ ಪ್ರತಿಷ್ಠಾನದ ವಿಶ್ವಸ್ಥ, ಜಿಲ್ಲಾಧಿಕಾರಿ ಡಾ. ಬಗಾದಿಗೌತಮ್, ಒಟ್ಟು 265 ಎಕರೆಯಲ್ಲಿ ಕಲ್ಲು ಕ್ವಾರಿ ನಡೆಯುತ್ತಿದ್ದು, ಅವುಗಳಿಂದ ಸಂಗ್ರಹಿಸಿರುವ ರಾಜಧನದಲ್ಲಿ ಅತಿಹೆಚ್ಚು ಆದ್ಯತಾ ಕ್ಷೇತ್ರದಡಿ ಬರುವ ಕುಡಿಯುವ ನೀರು, ಪರಿಸರ ಮಾಲಿನ್ಯ ನಿಯಂತ್ರಣ, ಆರೋಗ್ಯ, ಶಿಕ್ಷಣ, ನೈರ್ಮಲ್ಯತೆ, ಅಂಗವಿಕಲ ವ್ಯಕ್ತಿಗಳ ಕಲ್ಯಾಣ ಇವುಗಳಿಗೆ ಶೇ. 60ರಷ್ಟು ಹಣವನ್ನು ವಿನಿಯೋಗಿಸಲಾಗುವುದೆಂದು ಹೇಳಿದರು.
ಉಳಿದ ಶೇ. 40ರಷ್ಟು ಹಣವನ್ನು ಉಳಿದ ಆದ್ಯತಾ ಕ್ಷೇತ್ರಗಳ ಅಡಿ ಬರುವ ಭೌತಿಕ ಮೂಲ ಸೌಕರ್ಯ ನೀರಾವರಿ, ಗಣಿಗಾರಿಕೆ, ಜಿಲ್ಲೆಗಳಲ್ಲಿ ಪರಿಸರದ ಗುಣಮಟ್ಟ ಹೆಚ್ಚಿಸುವುದು, ಶಕ್ತಿ ಮತ್ತು ನೀರಿನ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಈ ಹಣವನ್ನು ಸದ್ಯದಲ್ಲೇ ಆಯಾ ಪಂಚಾಯತ್‌ಗಳಿಗೆ ನೀಡಲಾಗುತ್ತದೆ ಎಂದರು. ಚಿಕ್ಕಮಗಳೂರು ತಾಲೂಕಿಗೆ ಈ ಮೊತ್ತದಲ್ಲಿ 76.24 ಲಕ್ಷ ರೂ., ಕಡೂರು ತಾಲೂಕಿಗೆ 97.67 ಲಕ್ಷ ರೂ., ತರೀಕೆರೆ ತಾಲೂಕಿಗೆ 51.25 ಲಕ್ಷ ರೂ., ಕೊಪ್ಪ ತಾಲೂಕಿಗೆ 4.82 ಲಕ್ಷ ರೂ., ಮೂಡಿಗೆರೆ ತಾಲೂಕಿಗೆ 2.28 ಲಕ್ಷ ರೂ., ನರಸಿಂಹರಾಜಪುರ ತಾಲೂಕಿಗೆ 10752 ರೂ., ಶೃಂಗೇರಿ ತಾಲೂಕಿಗೆ 4.69 ಲಕ್ಷ ರೂಗಳನ್ನು ನೀಡಲಾಗಿದೆ ಎಂದು ವಿವರವಿತ್ತರು.
ಸರ್ಕಾರ 2017ರಿಂದ 19ರವರೆಗೆ ಸಂಗ್ರಹವಾಗಿರುವ ರಾಜಧನದ ಮೊತ್ತವನ್ನು ಪರಿಗಣಿಸಿ 3 ಪಟ್ಟು ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಖನಿಜ ಪ್ರತಿಷ್ಠಾನದ ಅನುಮೋದನೆ ಪಡೆಯಲು ಸೂಚಿಸಿರುವ ಹಿನ್ನೆಲೆಯಲ್ಲಿ ಇದೀಗ 7.27 ಕೋಟಿ ರೂಗಳ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಇದಕ್ಕೆ ಪ್ರತಿಷ್ಠಾನದ ಅನುಮೋದನೆ ಪಡೆಯಬೇಕಾಗಿದೆ ಎಂದು ಮಾಹಿತಿ ನೀಡಿದರು. ಈ ಕ್ರಿಯಾಯೋಜನೆಯ ಅನ್ವಯ ಚಿಕ್ಕಮಗಳೂರು ತಾಲೂಕಿನಲ್ಲಿ 2.69 ಕೋಟಿ ರೂ., ಕಡೂರು ತಾಲೂಕಿನಿಂದ 3.45 ಕೋಟಿ ರೂ., ತರೀಕೆರೆ ತಾಲೂಕಿನಿಂದ 71.65 ಲಕ್ಷ ರೂ., ಮೂಡಿಗೆರೆ ತಾಲೂಕಿನಿಂದ 8.05 ಲಕ್ಷ ರೂ., ಕೊಪ್ಪ ತಾಲೂಕಿನಿಂದ 17 ಲಕ್ಷ ರೂ., ಶೃಂಗೇರಿ ತಾಲೂಕಿನಿಂದ 16.56 ಲಕ್ಷ ರೂ., ನರಸಿಂಹರಾಜಪುರ ತಾಲೂಕಿನಿಂದ 38 ಸಾವಿರ ರೂ. ರಾಜಧನ ಸಂಗ್ರಹವಾಗಲಿದೆ.
ಜಿಲ್ಲಾ ಖನಿಜ ಪ್ರತಿಷ್ಠಾನದ ಮೊತ್ತ 2019ರ ಮಾ. 31ರವರೆಗೆ 2.43 ಕೋಟಿ ರೂ. ಸಂಗ್ರಹವಾಗಿದ್ದು, ಈ ವರ್ಷ ಅದಕ್ಕೆ 3 ಪಟ್ಟು ಮೊತ್ತ ಸಂಗ್ರಹಿಸಲು ಸೂಚಿಸಲಾಗಿದೆ. ಇದರಲ್ಲಿ ಆಡಳಿತಾತ್ಮಕ ವೆಚ್ಚಕ್ಕೆ 36.37 ಲಕ್ಷ ರೂ. ದತ್ತಿ ನಿಧಿಯಾಗಿ 72.74 ಲಕ್ಷ ರೂ. ಲಭ್ಯವಿರುವ 6.18 ಕೋಟಿ ರೂ. ಹಾಗೂ ಈ ನಿಧಿಯಲ್ಲಿ ಶೇ. 60ರಷ್ಟು ಹೆಚ್ಚಿನ ಆದ್ಯತಾ ಕ್ಷೇತ್ರಕ್ಕೆ 3.71 ಕೋಟಿ ರೂ. ಮತ್ತು ಇತರೆ ಆದ್ಯತಾ ಕ್ಷೇತ್ರಕ್ಕೆ 2.47 ಕೋಟಿ ರೂಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಹಣ ನೇರವಾಗಿ ಆಯಾ ಪಂಚಾಯತ್‌ಗಳಿಗೆ ಲಭ್ಯವಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರೀಶ್‌ಪಾಂಡೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವತಿ, ಹಿರಿಯ ಭೂವಿಜ್ಞಾನಿ ಡಾ. ಎಂ.ಜೆ. ಮಹೇಶ್ ಇದ್ದರು.
ಒಟ್ಟು 265 ಎಕರೆಯಲ್ಲಿ ಕಲ್ಲು ಕ್ವಾರಿ ನಡೆಯುತ್ತಿದ್ದು, ಅವುಗಳಿಂದ ಸಂಗ್ರಹಿಸಿರುವ ರಾಜಧನದಲ್ಲಿ ಅತಿಹೆಚ್ಚು ಆದ್ಯತಾ ಕ್ಷೇತ್ರದಡಿ ಬರುವ ಕುಡಿಯುವ ನೀರು, ಪರಿಸರ ಮಾಲಿನ್ಯ ನಿಯಂತ್ರಣ, ಆರೋಗ್ಯ, ಶಿಕ್ಷಣ, ನೈರ್ಮಲ್ಯತೆ, ಅಂಗವಿಕಲ ವ್ಯಕ್ತಿಗಳ ಕಲ್ಯಾಣ ಇವುಗಳಿಗೆ ಶೇ. 60ರಷ್ಟು ಹಣವನ್ನು ವಿನಿಯೋಗಿಸಲಾಗುವುದು.