Advertisement

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತಗೂ ಗೌರವ

01:03 PM Nov 22, 2019 | Naveen |

ಚಿಕ್ಕಮಗಳೂರು: ಒಬ್ಬ ಸಾಮಾನ್ಯ ಕಾರ್ಯಕರ್ತನೂ ಕೂಡ ರಾಜ್ಯಾಧ್ಯಕ್ಷನಾಗುವ ಅವಕಾಶವಿದ್ದರೆ ಅದು ಬಿಜೆಪಿಯಲ್ಲಿ ಮಾತ್ರ. ಅದಕ್ಕೆ ನಾನೇ ಸಾಕ್ಷಿ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿದರು.

Advertisement

ನಗರದ ಬ್ರಹ್ಮ ಸಮುದ್ರ ರಂಗಣ್ಣನವರ ಛತ್ರ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿರಿಯರ ತಪಸ್ಸಿನ ಫಲವಾಗಿ ಬಿಜೆಪಿ ಇಂದು ದೇಶಾದ್ಯಂತ ಬೆಳೆದಿದೆ. ಅಧಿಕಾರ ಎಂಬುದು ಹುದ್ದೆಯಲ್ಲ, ಜವಾಬ್ದಾರಿ. ರಾಜ್ಯಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳಲು ಭಯವಿತ್ತು. ಆದರೆ, ಹಿರಿಯರ ಮಾರ್ಗದರ್ಶನ, ದೊಡ್ಡ ಕಾರ್ಯಕರ್ತರ ಪಡೆಯಿರುವ ವಿಶ್ವಾಸದಿಂದ ಈ ಸ್ಥಾನ ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಬಿಜೆಪಿ ವಿಚಾರಧಾರೆಯಲ್ಲಿ ಎಂದೂ ರಾಜೀ ಮಾಡಿಕೊಂಡಿಲ್ಲ. ಹಿಂದೆ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಆರಂಭಿಸಿದ್ದ ಕಾಶ್ಮೀರ ಹೋರಾಟ ಇಂದು ಕಾಶ್ಮೀರಕ್ಕೆ ವಿಶೇಷವಾಗಿ ಇದ್ದ 370ನೇ ವಿಧಿ ರದ್ದುಪಡಿಸುವ ಮೂಲಕ ಕೊನೆಗೊಂಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಅಂದು ಅಡ್ವಾಣಿ ನೇತೃತ್ವದಲ್ಲಿ ಶುರುವಾದ ರಥಯಾತ್ರೆ ಹೋರಾಟ ಇಂದು ನ್ಯಾಯಾಲಯದಲ್ಲಿ ಉತ್ತಮ ತೀರ್ಪು ಹೊರಬೀಳುವ ಮೂಲಕ ಸುಖಾಂತ್ಯ ಕಂಡಿದೆ. ಮುಂದೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನೀರ್ಮಾಣವಾಗಲಿದೆ. ಇದು ನಮ್ಮ ಕಾರ್ಯ ಪದ್ಧತಿ ಕೂಡ ಹೌದು ಎಂದು ಹೇಳಿದರು.

ನಮ್ಮದು ಆಂತರಿಕ ಪ್ರಜಾಪ್ರಭುತ್ವದ ತಳಹದಿಯಡಿ ಇರುವ ಪಾರ್ಟಿ. ಹಾಗಾಗಿ, ತಾವು ಮೊದಲ ಬಾರಿಗೆ ಸಂಸತ್‌ ಚುನಾವಣೆಗೆ ಸ್ಪರ್ಧಿಸಿದ 2004 ರಿಂದ ಇಲ್ಲಿಯವರೆಗೆ ಅನೇಕ ಬಿಜೆಪಿ ರಾಷ್ಟ್ರಾಧ್ಯಕ್ಷರು ಬದಲಾದರು. ಆದರೆ, ಕಾಂಗ್ರೆಸ್‌ನಲ್ಲಿ 2004ರಲ್ಲಿಯೂ ಸೋನಿಯಾ ಅಧ್ಯಕ್ಷರಾಗಿದ್ದರು. ಈಗಲೂ ಅವರೇ ಅಧ್ಯಕ್ಷರಾಗಿದ್ದಾರೆ. ಮಧ್ಯದಲ್ಲಿ ರಾಹುಲ್‌ ಒಬ್ಬರನ್ನು ಬಿಟ್ಟರೆ ಬೇರಾರೂ ಅಧ್ಯಕ್ಷರಾಗಿಲ್ಲ ಎಂದು ವ್ಯಂಗ್ಯವಾಡಿದರು.

ಮಹಾತ್ಮಾ ಗಾಂಧೀಜಿ ಅವರ ರಾಮರಾಜ್ಯದ ಪರಿಕಲ್ಪನೆಯನ್ನು ಹಿಂದಿನ ಯಾವ ಸರ್ಕಾರಗಳು ಮಾಡಲಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಾರಗೊಳಿಸುತ್ತಿದೆ. ಬಿಜೆಪಿಗೆ ಈಗ ಸುವರ್ಣಯುಗದ ಕಾಲ ಎಂದು ಬಣ್ಣಿಸಿದರು.

Advertisement

ಪ್ರವಾಸೋದ್ಯಮ, ಸಕ್ಕರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೂ ಕೂಡ ಉನ್ನತ ಹುದ್ದೆ ಏರಬೇಕು ಎಂಬುದು ಅಂಬೇಡ್ಕರ್‌ ಆಶಯವಾಗಿತ್ತು. ಕಟೀಲ್‌ ಕೂಡ ಒಬ್ಬ ಸಾಮಾನ್ಯ ಧರ್ಮ ಸಂಘಟಕನಾಗಿ, ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡು ಇಂದು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಜಾತಿಯ ಮತಗಳಿಲ್ಲದಿದ್ದರೂ 3 ಬಾರಿ ದ.ಕ.ದಲ್ಲಿ ಸಂಸದರಾಗಿದ್ದಾರೆ. ಜಾತ್ಯತೀತ ಎಂದರೆ ಜಾತಿಗೆ ಮಣೆ ಹಾಕುವುದಲ್ಲ ಎಂಬುದನ್ನು ಬಿಜೆಪಿ ತೋರಿಸಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್‌ ಮಾತನಾಡಿ, ಇಂದು ಮೋದಿ ಸರ್ಕಾರದ ವಿನಂತಿಗಳನ್ನು ಸ್ವೀಕರಿಸುವ ಕಾಲಘಟ್ಟದಲ್ಲಿ ಸಮಾಜ ಇದೆ ಎಂದು ಅಭಿಪ್ರಾಯಿಸಿದರು. ಜಿಲ್ಲಾ ಉಸ್ತುವಾರಿ ಗಿರೀಶ್‌ ಪಟೇಲ್‌ ಮಾತನಾಡಿದರು. ಬೀರೂರು ಪುರಸಭೆಯಲ್ಲಿ ವಿಜೇತ ಅಭ್ಯರ್ಥಿಗಳು ಮತ್ತು ಬಿಜೆಪಿ 8 ಮಂಡಲಗಳ ನೂತನ ಅಧ್ಯಕ್ಷರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್‌. ಜೀವರಾಜ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಡಿ.ಎಸ್‌.ಸುರೇಶ್‌, ಎಂಎಲ್ಸಿ ಎಂ.ಕೆ.ಪ್ರಾಣೇಶ್‌ ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯ್‌ಕುಮಾರ್‌ ಹಾಜರಿದ್ದರು. ಶಾಸಕ ಬೆಳ್ಳಿಪ್ರಕಾಶ್‌ ಸ್ವಾಗತಿಸಿ, ಎಚ್‌.ಡಿ.ತಮ್ಮಯ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next