ಚಿಕ್ಕಮಗಳೂರು: ನರಕ ಚತುರ್ದಶಿ ಯಂದು ದೇವೀರಮ್ಮನ ಬೆಟ್ಟ ಹತ್ತುವ ಭಕ್ತರ ಸಹಾಯಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರೀಶ್ ಪಾಂಡೆ, ಶನಿವಾರ ಸಂಜೆಯಿಂದಲೇ 400 ರಿಂದ 500 ಮಂದಿ ಪೊಲೀಸರು ಬೆಟ್ಟದ ಬುಡ ಹಾಗೂ ಜನ ನಡೆದುಕೊಂಡು ಹೋಗುವ ಮಾರ್ಗದಲ್ಲಿ ನಿಂತು ರಾತ್ರಿವೇಳೆಯಲ್ಲಿ ಬೆಟ್ಟಕ್ಕೆ ಹೋಗಬಾರದೆಂದು ಹೇಳುತ್ತಾರೆ ಎಂದು ತಿಳಿಸಿದರು.
ಬೆಟ್ಟ ಹತ್ತಲು ಈ ಬಾರಿ ಸತತವಾಗಿ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾಲುದಾರಿ ಸೇರಿದಂತೆ ಕಡಿದಾದ ಕಡೆ ಹೆಚ್ಚಿನ ಜಾರಿಕೆ ಇರುವುದರಿಂದ ಯಾವುದೇ ರೀತಿ ಸಮಸ್ಯೆಯಾದರೆ ತಕ್ಷಣ ಭಕ್ತರ ನೆರವಿಗೆ ಪೊಲೀಸ್ ಸಿಬ್ಬಂದಿ ಧಾವಿಸುತ್ತಾರೆಂದು ಹೇಳಿದರು.
ವಾಯುಭಾರ ಕುಸಿತದ ಪರಿಣಾಮ ಬಾಬಾಬುಡನ್ ಬೆಟ್ಟ ಶ್ರೇಣಿ ಸೇರಿದಂತೆ ಎಲ್ಲೆಡೆ ನಿರಂತರವಾಗಿ ಮಳೆ ಬರುತ್ತಿದೆ. ಮಳೆ ಇನ್ನಷ್ಟು ಹೆಚ್ಚಾಗುತ್ತಿದೆಯೇ ಹೊರತು ಕಮ್ಮಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸಹ ಮಳೆ ಮುಂದುವರೆಯುವ ಲಕ್ಷಣಗಳಿವೆ. ಬೆಟ್ಟದ ಬುಡದಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲಾಗಿದೆ. ಜೊತೆಗೆ ವೈದ್ಯರು ಸಹ ಅಲ್ಲಿಯೇ ಇರುತ್ತಾರೆ.
ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಸಹಾಯಕ್ಕೆ ಧಾವಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಭಕ್ತರು ರಾತ್ರಿ ವೇಳೆಯಲ್ಲಿ ಬೆಟ್ಟ ಹತ್ತುವುದಾಗಿ ಪಟ್ಟು ಹಿಡಿದರೆ ಅವರ
ಎಲ್ಲಾ ವಿವರವನ್ನು ಪಡೆಯಲಾಗುವುದು. ಭಕ್ತರು ಸಹ ಶನಿವಾರ ರಾತ್ರಿ ಬೆಟ್ಟ ಹತ್ತಲು ಪ್ರಯತ್ನಿಸದೆ, ಭಾನುವಾರ ಬೆಳಗಿನಿಂದ ಬೆಟ್ಟ ಹತ್ತುವುದು ಮಳೆಯ ವಾತಾವರಣದಲ್ಲಿ ಸುರಕ್ಷಿತ ಎಂದು ಹೇಳಿದರು.
ಈ ಬಾರಿ ನಿರಂತರ ಮಳೆ ಇರುವುದರಿಂದ ಭಕ್ತರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ 37 ಸಾವಿರ ಮಂದಿ ಭಕ್ತರು ಬೆಟ್ಟ ಹತ್ತಿ ದೇವೀರಮ್ಮನ ದರ್ಶನ ಮಾಡಿದ್ದರು. ಈ ಬಾರಿ ಸತತ ಮಳೆಯಿಂದ ಅಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಬರದಂತೆ ಮಳೆಯೇ ತಡೆ ಒಡ್ಡಬಹುದು. ಆದರೆ, ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.