Advertisement

93ಡೆಂಘೀ, 9ಚಿಕೂನ್‌ಗುನ್ಯಾ ಪ್ರಕರಣ ಪತ್ತೆ

11:30 AM Jul 14, 2019 | Naveen |

ಚಿಕ್ಕಮಗಳೂರು: ಜಿಲ್ಲೆಯಲ್ಲಿ 93ಡೆಂಘೀ ಹಾಗೂ 9 ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ 7, ಕಡೂರು ಹಾಗೂ ತರೀಕೆರೆಯಲ್ಲಿ ತಲಾ ಒಬ್ಬರು ಚಿಕೂನ್‌ ಗುನ್ಯಾದಿಂದ ಬಳಲುತ್ತಿದ್ದಾರೆ.

Advertisement

ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಜಿಲ್ಲಾ ಪ್ರಯೋಗಾಲಯ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿಗಳ ಮಾಹಿತಿ ಪ್ರಕಾರ, ನಗರ ಸೇರಿದಂತೆ ಜಿಲ್ಲಾದ್ಯಂತ ಡೆಂಘೀ ಜ್ವರದ ಪ್ರಕರಣಗಳು ದಿನೇ ದಿನೆ ಉಲ್ಬಣಗೊಳ್ಳುತ್ತಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಜಿಲ್ಲಾದ್ಯಂತ ಜು.10ರ ವರೆಗೆ ಒಟ್ಟು 33 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 93ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲೇ ಹೆಚ್ಚು ಅಂದರೆ 73 ಪ್ರಕರಣಗಳು ಕಂಡು ಬಂದಿವೆ. ತಾಲೂಕಿನ 62 ಗ್ರಾಮಗಳಲ್ಲಿನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 39ಆರೋಗ್ಯ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ 49,418 ಮಂದಿ ಜ್ವರದಿಂದ ಬಳಲುತ್ತಿದ್ದು, ಆ ಪೈಕಿ 197 ಜನರ ರಕ್ತದ ಮಾದರಿ ಪರೀಕ್ಷಿಸಿದಾಗ ಒಟ್ಟು 73 ಮಂದಿಗೆ ಡೆಂಘೀ ಇರುವುದು ಗೊತ್ತಾಗಿದೆ.

ಕಡೂರು ತಾಲೂಕಿನ 10 ಗ್ರಾಮಗಳ ವ್ಯಾಪ್ತಿಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 10 ಉಪ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 2 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದರೆ, ತರೀಕೆರೆ ತಾಲೂಕಿನ 10 ಗ್ರಾಮಗಳ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 10 ಉಪ ಆರೋಗ್ಯ ಕೇಂದ್ರಗಳಲ್ಲಿ 7 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.

ಕೊಪ್ಪ ತಾಲೂಕಿನ 10 ಗ್ರಾಮಗಳ ವ್ಯಾಪ್ತಿಯಲ್ಲಿ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ 6 ಮಂದಿಗೆ ಡೆಂಘೀ ಇರುವುದು ಗೊತ್ತಾಗಿದೆ. ಶೃಂಗೇರಿ ತಾಲೂಕಿನ 5 ಗ್ರಾಮಗಳ ವ್ಯಾಪ್ತಿಯಲ್ಲಿ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 5 ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ 3 ಡೆಂಘೀ ಪ್ರಕರಣ ಗೋಚರಿಸಿವೆ. ಮೂಡಿಗೆರೆ ತಾಲೂಕಿನ 2 ಗ್ರಾಮಗಳ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 2 ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಒಟ್ಟು 2 ಡೆಂಘೀ ಪ್ರಕರಣಗಳು ವರದಿಯಾಗಿವೆ.

Advertisement

ಜನವರಿಯಿಂದ ಏಪ್ರಿಲ್ ವರೆಗೆ ನಿಯಂತ್ರಣದಲ್ಲಿದ್ದ ಡೆಂಘೀ ಪ್ರಕರಣಗಳು ಮೇ ಮತ್ತು ಜೂನ್‌ ತಿಂಗಳಲ್ಲಿ ತೀವ್ರಗೊಂಡಿವೆ. ಜನವರಿ ತಿಂಗಳಲ್ಲಿ ಒಟ್ಟು 116 ರಕ್ತದ ಮಾದರಿ ಪರೀಕ್ಷೆಯಲ್ಲಿ 22ರಲ್ಲಿ ಶಂಕಿತ ಡೆಂಘೀ ಇರುವುದು ಪತ್ತೆಯಾಗಿದೆ. ಫೆಬ್ರವರಿಯಲ್ಲಿ 6, ಮಾರ್ಚ್‌ ತಿಂಗಳಲ್ಲಿ ಒಂದು ಹಾಗೂ ಏಪ್ರಿಲ್ ತಿಂಗಳಲ್ಲಿ 7 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದವು ಎಂದು ಜಿಲ್ಲಾ ಸರ್ಜನ್‌ ಡಾ.ಕುಮಾರ ನಾಯ್ಕ ತಿಳಿಸಿದರು.

ಆದರೆ, ಮೇ ತಿಂಗಳಲ್ಲಿ ದಿಢೀರನೆ ಜ್ವರದ ಪ್ರಕರಣ ಹೆಚ್ಚಾಗಿ ಕಂಡು ಬಂದಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಪೈಕಿ 275 ಜನರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ 82 ಜನರಲ್ಲಿ ಶಂಕಿತ ಡೆಂಘೀ ಇರುವುದು ಕಂಡುಬಂತು. ಈ ಪೈಕಿ ಎಲ್ಲರೂ ಗುಣಮುಖರಾಗಿದ್ದಾರೆ. ಆದರೆ, ಜೂನ್‌ ತಿಂಗಳಲ್ಲಿ ಶಂಕಿತ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಪೈಕಿ ಒಬ್ಬರಲ್ಲಿ ಡೆಂಘೀ ಇರುವುದು ದೃಢಪಟ್ಟಿದೆ ಎಂದು ಹೇಳಿದರು.

ಜಿಲ್ಲಾಸ್ಪತ್ರೆಯ ಪ್ರಯೋಗಾಲಯದಲ್ಲಿ ಜೂನ್‌ ತಿಂಗಳಲ್ಲಿ ಒಟ್ಟು 483 ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ 163ರಲ್ಲಿ ಶಂಕಿತ ಡೆಂಘೀ ಜ್ವರ ಇರುವುದು ಪತ್ತೆಯಾಗಿತ್ತು. ಈ ಪೈಕಿ 1ರಲ್ಲಿ ಡೆಂಘೀ ಇರುವುದು ಧೃಢಪಟ್ಟಿದೆ.
ಡಾ.ಕುಮಾರ ನಾಯ್ಕ,
ಜಿಲ್ಲಾ ಸರ್ಜನ್‌, ಜಿಲ್ಲಾಸ್ಪತ್ರೆ, ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next