ಚಿಕ್ಕಮಗಳೂರು: ದತ್ತಪೀಠದಲ್ಲಿ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಚಟುವಟಿಕೆಗಳು ನಡೆಯುತ್ತಿದ್ದು, ಅವುಗಳನ್ನು ತಡೆಗಟ್ಟದಿದ್ದಲ್ಲಿ ರಾಜ್ಯದೆಲ್ಲೆಡೆಯಿಂದ ದತ್ತಪೀಠ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಭಜರಂಗ ದಳ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಾದಿತ ಸ್ಥಳವಾದ ದತ್ತಪೀಠದಲ್ಲಿ ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆ ನಡೆಸಬಾರದು. ಯಥಾಸ್ಥಿತಿ ಕಾಪಾಡಬೇಕು ಎಂಬ ಆದೇಶವಿದ್ದರೂ ಅಲ್ಲಿನ ಮುಸಲ್ಮಾನರು ಕಾನೂನು ಉಲ್ಲಂಘಿಸಿ ಅನಧಿಕೃತವಾಗಿ ಸ್ಪೀಕರ್‌ಗಳನ್ನು ಅಳವಡಿಸಿ ಅಜಾನ್ ಕೂಗುತ್ತಿದ್ದಾರೆ ಮತ್ತು ನಮಾಜ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಮಾಂಸಾಹಾರ ಮತ್ತು ಪ್ರಾಣಿ ವಧೆ ಮಾಡುತ್ತಿದ್ದಾರೆ ಎಂದು ದೂರಿದರು.
ದತ್ತಪೀಠದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಜಿಲ್ಲಾಡಳಿತಕ್ಕೆ ಸಾಕ್ಷಿ ಸಹಿತ ದೂರು ಸಲ್ಲಿಸಲಾಗಿದೆ. ಆದರೂ, ಜಿಲ್ಲಾಡಳಿತ ಅವುಗಳನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ. ಮೈಕ್ ಹಾಕಿರುವ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪ್ರಶ್ನಿಸಿದಾಗ, ಮೈಕ್ ಅಳವಡಿಸಲು ಅನುಮತಿ ನೀಡಿಲ್ಲವೆಂಬ ಉತ್ತರ ದೊರೆತ್ತದೆ ಎಂದು ಹೇಳಿದರು.
ಈ ವಿಚಾರವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಹಳ ಗಂಭೀರವಾಗಿ ಪರಿಗಣಿಸಿದೆ. ಜು.7ರಂದು ಬಾಳೆಹೊನ್ನೂರಿನಲ್ಲಿ ಜಿಲ್ಲಾ ಅಭ್ಯಾಸ ವರ್ಗ ನಡೆಯುತ್ತಿದ್ದು, ಅಲ್ಲಿ ರಾಜ್ಯದೆಲ್ಲೆಡೆಯಿಂದ ದತ್ತಪೀಠ ಚಲೋ ಮತ್ತು ಧರಣಿ ನಡೆಸುವ ಕುರಿತು ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಭಜರಂಗದಳ ಜಿಲ್ಲಾ ಸಂಚಾಲಕ ತುಡಕೂರು ಮಂಜು ಮಾತನಾಡಿ, ದತ್ತಪೀಠ ವಿವಾದದ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ನಾವು ಒಪ್ಪುವುದಿಲ್ಲ. ಹಾಗಾಗಿಯೇ ನ್ಯಾಯಾಲಯದಲ್ಲಿ ವರದಿ ಕುರಿತು ಪ್ರಶ್ನಿಸಿದ್ದೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ದತ್ತಪೀಠದ ಬಗ್ಗೆ ತಮಗೆ ಎಲ್ಲವೂ ಗೊತ್ತು. ಅಲ್ಲಿಗೆ ಹಲವು ಬಾರಿ ಹೋಗಿರುವುದಾಗಿ ಹೇಳಿದ್ದಾರೆ. ಸಮಿತಿ ಅಧ್ಯಕ್ಷರಾಗಿ ಅವರು ಒಮ್ಮೆಯೂ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಸಮಿತಿಯವರು ಬೆಂಗಳೂರಿನಲ್ಲಿ ಕುಳಿತು ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಯೋಗೀಶ್ ರಾಜ್ ಅರಸ್, ಪೂರ್ಣೇಶ್, ಶಿವಕುಮಾರ್ ಉಪಸ್ಥಿತರಿದ್ದರು.