Advertisement
ದತ್ತಮಾಲಾಧಾರಣೆ, ಮೆರವಣಿಗೆ, ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆಗಳ ಸಮಯ, ಸ್ಥಳ, ಮಾರ್ಗ ಇತ್ಯಾದಿ ವಿವರಗಳನ್ನು ಮತ್ತು ನೇತೃತ್ವ ವಹಿಸುವ ಸಂಘಟಕರು, ಸಂಯೋಜಕರ ವಿವರಗಳನ್ನು ಮುಂಚಿತವಾಗಿ ಆಯಾ ತಹಶೀಲ್ದಾರರಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು. ಸದರಿ ಅಧಿಕಾರಿಗಳು ನಿಗದಿಪಡಿಸುವ ಮಾರ್ಗ, ಸ್ಥಳ, ಸಮಯದ ಬಗ್ಗೆ ಸೂಕ್ತ ಅನುಮತಿ ಪಡೆದು ಅದರಂತೆ ಕ್ರಮ ವಹಿಸತಕ್ಕದ್ದು. ಅನುಮತಿ ಇಲ್ಲದೇ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
Related Articles
Advertisement
ಕಾರ್ಯಕ್ರಮದ ಯಾವುದೇ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಧರ್ಮ, ಕೋಮು, ಜಾತಿ, ಪಂಥ ಮತ್ತಿತರ ಸಂಘಟನೆಗಳ ವಿರುದ್ಧ ಅಥವಾ ನಿಂದಿಸುವಂತಹ ಘೋಷಣೆ, ಅವಾಚ್ಯ ಶಬ್ಧಗಳ ಬಳಕೆ, ನಿಂದನೆ, ವೇದಿಕೆ ನಿರ್ಮಾಣ, ಭಾಷಣ, ಮದ್ಯಪಾನ ಬಳಕೆ, ಬ್ಯಾನರ್-ಭಿತ್ತಿಪತ್ರಗಳ ಪ್ರದರ್ಶನ ವಿರೂಪಗೊಳಿಸುವ ಮತ್ತು ನಿಂದನಾರ್ಹ ಚಟುವಟಿಕೆಗಳನ್ನು ನಿಷೇಧಿಸಿದೆ. ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡುವ ಹಾಗೂ ಬಿತ್ತರಗೊಳಿಸುವ ಬ್ಯಾನರ್, ಬಂಟಿಂಗ್ಸ್, ಧ್ವಜ, ಭಿತ್ತಿಪತ್ರ ಬರಹಗಳು ಹಾಗೂ ಆಕೃತಿಗಳನ್ನು ಸರ್ಕಾರಿ, ಅರೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಮತ್ತು ಆಸ್ತಿಗಳ ಮೇಲೆ ಪ್ರಚಾರಪಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪಾದುಕೆ ದರ್ಶನಕ್ಕಾಗಿ ನಿಗದಿಗೊಳಿಸಿರುವ ಮಾರ್ಗ ಹಾಗೂ ಸ್ಥಳಗಳಲ್ಲಿಯೇ ಪ್ರತಿಯೊಬ್ಬರೂ ಶಿಸ್ತು, ಸಂಯಮ ಹಾಗೂ ಭಕ್ತಿಭಾವದಿಂದ ದರ್ಶನ ಮಾಡಿ ಹೊರಬರುವುದು ಕಡ್ಡಾಯ. ಅಲ್ಲದೇ, ವಾಹನಳನ್ನು ನಿಗದಿಗೊಳಿಸಿರುವ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು ಎಂದು ಸೂಚಿಸಿದ್ದಾರೆ. ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಐ.ಡಿ.ಪೀಠದ ಆವರಣದಲ್ಲಿ ಮತ್ತು ಪಾದುಕೆಗೆ ಇರಿಸಿರುವ ಸ್ಥಳದಲ್ಲಿ ಇರಬಹುದಾದ ಧಾರ್ಮಿಕ ಸ್ಥಾಪನೆಗಳು, ಕುರುಹುಗಳು, ನಿರ್ಮಾಣಗಳಿಗೆ ಯಾವುದೇ ರೀತಿಯ ಧಕ್ಕೆ ಹಾಗೂ ಹಾನಿಯಾಗದಂತೆ ಭಕ್ತಾದಿಗಳಿಗೆ ಮನವರಿಕೆ ಮಾಡುವುದು ಮತ್ತು ಅದರಂತೆ ಅನುಸರಿಸುವುದು ಸಂಘಟಕರ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಐ.ಡಿ.ಪೀಠದ ಆವರಣದಲ್ಲಿ ಮತ್ತು ಪಾದುಕೆ ಇರುವ ಗುಹೆ ಪ್ರವೇಶದಿಂದ ನಿರ್ಗಮನದ ವರೆಗಿನ ಸ್ಥಳದಲ್ಲಿ ಭಜನೆ, ಕರ್ಪೂರ ಬಳಕೆ, ಪ್ರಸಾದ ವಿನಿಯೋಗ, ಧ್ಯಾನ, ಪ್ರತಿಮೆಗಳ ಬಳಕೆ ಇತ್ಯಾದಿ ಪೂಜಾ ವಿಧಾನಗಳನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪಾದುಕೆ ದರ್ಶನ ಹೊರತುಪಡಿಸಿ ಪಾದುಕೆ ಸ್ಪರ್ಶಿಸುವ ಅಥವಾ ಮುಟ್ಟುವ ಇತರೆ ಯಾವುದೇ ಕ್ರಮಗಳಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.