Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ. ತಾತ್ಕಾಲಿಕವಾಗಿ ವರದಿ ಸಿದ್ಧಪಡಿಸಲಾಗಿದೆ. 240 ಕೋಟಿ ರೂ. ನಷ್ಟದ ಪೈಕಿ ಮೂಡಿಗೆರೆ ತಾಲೂಕಿನಲ್ಲಿಯೇ 140 ಕೋಟಿ ರೂ. ನಷ್ಟವಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 28.32 ಕೋಟಿ ರೂ., ನರಸಿಂಹರಾಜಪುರ ತಾಲೂಕಿನಲ್ಲಿ 16, ಶೃಂಗೇರಿಯಲ್ಲಿ 20.47 ಹಾಗೂ ಕೊಪ್ಪ ತಾಲೂಕಿನಲ್ಲಿ 35 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಹೇಳಿದರು.
Related Articles
Advertisement
ಜಿಲ್ಲಾದ್ಯಂತ 1,565 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 1.29 ಕೋಟಿ ರೂ. ನಷ್ಟವಾಗಿದೆ. ಬಿಎಸ್‌ಎನ್‌ಎಲ್ ಇಲಾಖೆಗೆ 50.50 ಲಕ್ಷ ರೂ. ನಷ್ಟವಾಗಿದೆ ಎಂದರು.
ಶೇ.310 ಹೆಚ್ಚು: ಜಿಲ್ಲಾದ್ಯಂತ ವಾರ್ಷಿಕ ವಾಡಿಕೆ ಮಳೆ 1,757 ಮಿ.ಮೀ. ಆಗಬೇಕಿತ್ತು. ಆ.14ರ ವರೆಗೆ 1,217 ಮಿ.ಮೀ. ಮಳೆಯಾಗಿದೆ. ಆಗಸ್ಟ್ ತಿಂಗಳಲ್ಲಿ 199 ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಆ.14ರ ವರೆಗೆ 631 ಮಿ.ಮೀ. ಮಳೆಯಾಗಿದ್ದು, ಶೇ.310ರಷ್ಟು ಹೆಚ್ಚಾಗಿದೆ ಎಂದು ವಿವರಿಸಿದರು.
ಮಳೆಯಿಂದಾಗಿ ಈವರೆಗೂ ಜಿಲ್ಲೆಯಲ್ಲಿ 9 ಜನ ಸಾವಪ್ಪಿದ್ದಾರೆ. ಈ ಪೈಕಿ 7 ಕುಟುಂಬಗಳಿಗೆ ತಲಾ 5 ಲಕ್ಷ ರೂ.ನಂತೆ ಪರಿಹಾರ ನೀಡಲಾಗಿದೆ. 10 ಜಾನುವಾರುಗಳು ಸಾವನ್ನಪ್ಪಿದ್ದು, ಅದಕ್ಕೂ ಪರಿಹಾರ ನೀಡಲಾಗಿದೆ. ಮೂಡಿಗೆರೆ ತಾಲೂಕಿನ ಮದುಗುಂಡಿ ಗ್ರಾಮದ ನಾಗಪ್ಪಗೌಡ ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಈವರೆಗೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಗ್ರಾಮದಲ್ಲಿ 500 ಅಡಿಗೂ ಹೆಚ್ಚು ಕೆಸರು ತುಂಬಿಕೊಂಡಿದ್ದು, ಶೋಧ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಆದರೂ, ಶೋಧ ಕಾರ್ಯವನ್ನು ಮುಂದುವರೆಸಲಾಗಿದೆ ಎಂದರು.
ಮನೆಯಲ್ಲಿದ್ದ ಪದಾರ್ಥಗಳನ್ನು ಕಳೆದುಕೊಂಡವರಿಗೆ ಎನ್‌ಡಿಆರ್‌ಎಫ್ ಕಾನೂನು ರೀತಿ 3,800 ರೂ. ಕೊಡಬೇಕಿತ್ತು. ಅದರಂತೆ, 873 ಕುಟುಂಬಗಳಿಗೆ ಈಗಾಗಲೇ ಚೆಕ್ ವಿತರಿಸಲಾಗಿದೆ. ರಾಜ್ಯ ಸರ್ಕಾರದಿಂದ ಇಂತಹ ಕುಟುಂಬಗಳಿಗೆ 6,200 ರೂ. ನೀಡುವುದಾಗಿ ಆದೇಶ ಬಂದಿದೆ. ಉಳಿದ ಹಣವನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಲೂ 26 ನಿರಾಶ್ರಿತರ ಕೇಂದ್ರಗಳು ನಡೆಯುತ್ತಿದೆ. ಈ ಕೇಂದ್ರಗಳಲ್ಲಿ 1,631 ಜನರಿದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿದ್ಯುತ್ ಸಂಪರ್ಕವಿಲ್ಲದ ಕೇಂದ್ರಗಳಲ್ಲಿ ಜನರೇಟರ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಅತಿವೃಷ್ಟಿಯಿಂದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಯೋಧರು, ಪೊಲೀಸ್, ಸಾರ್ವಜನಿಕರು, ಎಲ್ಲ ಇಲಾಖೆಗಳ ಅಧಿಕಾರಿಗಳು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಅದರಿಂದಾಗಿಯೇ ಜಿಲ್ಲೆಯಲ್ಲಿ ಹೆಚ್ಚಿನ ಸಾವು- ನೋವುಗಳು ತಪ್ಪಿವೆ. ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಎಸ್.ಅಶ್ವಥಿ, ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಉಪಸ್ಥಿತರಿದ್ದರು.