ಚಿಕ್ಕಮಗಳೂರು: ಜಿಲ್ಲೆಯ ಜನರಿಗೆ ಪರಿಸರ ಜಾಗೃತಿಯ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅಭಿಪ್ರಾಯಪಟ್ಟರು.
ಪತ್ರಿಕಾ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರು ಪ್ರಸ್ ಕ್ಲಬ್ ವತಿಯಿಂದ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಶನಿವಾರ ಪತ್ರಕರ್ತರಿಗೆ ಆಯೋಜಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಮಳೆ ಕಡಿಮೆಯಾದಲ್ಲಿ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಡಿಸೆಂಬರ್‌ನಲ್ಲಿಯೇ ನೀರಿನ ಅಭಾವ ಉಂಟಾಗುತ್ತದೆ. ಚಿಕ್ಕಮಗಳೂರಿನಲ್ಲಿ ಉತ್ತಮ ಪರಿಸರ ಸಂಪತ್ತಿದೆ. ಅದರಿಂದಾಗಿ ನೀರಿನ ಕೊರತೆ ಪ್ರಮಾಣ ಕಡಿಮೆ ಇರುತ್ತದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆ ನಿರ್ಲಕ್ಷಿಸಬಾರದು. ಬಿಟ್ ಕಾಯಿನ್‌ನಂತಹ ವಂಚನೆ ಸಂಸ್ಥೆಗಳು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಮಾಧ್ಯಮಗಳು ಕೈಜೋಡಿಸಬೇಕು ಎಂದು ಕೋರಿದರು.
ಕ್ರೀಡೆಗಳಲ್ಲಿ ಸೋಲು, ಗೆಲುವಿಗಿಂತ ಸ್ಪರ್ಧಾ ಮನೋಭಾವನೆಯಿಂದ ಭಾಗವಹಿಸಿಕೆ ಮುಖ್ಯವಾಗುತ್ತದೆ. ಜಗತ್ತಿನಲ್ಲಿ ವೈಯಕ್ತಿಕ ಸಾಧನೆಗಳಿಗಿಂತ ತಂಡಗಳ ಸಾಧನೆಗಳೇ ಹೆಚ್ಚಾಗಿರುತ್ತದೆ. ಅದರಿಂದ ತಂಡಗಳು ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಚಿಕ್ಕಮಗಳೂರು ಪ್ರಸ್ ಕ್ಲಬ್ ಅಧ್ಯಕ್ಷ ಆರಗ ರವಿ ಮಾತನಾಡಿ, ಪತ್ರಕರ್ತರು ಮತ್ತು ಪೊಲೀಸರದ್ದು ಸದಾ ಒತ್ತಡದ ಕೆಲಸವಾಗಿರುತ್ತದೆ. ಒತ್ತಡದ ವೃತ್ತಿ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿ ರುತ್ತದೆ. ಈ ನಿಟ್ಟಿನಲ್ಲಿ ಪ್ರಸ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಸಂದೇಶ್ ನೇತೃತ್ವದ ತಂಡ ವಿಜಯಶಾಲಿಯಾಗಿ ಹೊರಹೊಮ್ಮಿತು.
ಪ್ರಸ್ ಕ್ಲಬ್ ಉಪಾಧ್ಯಕ್ಷ ಎಸ್.ಕೆ.ಎಲ್.ಲಕ್ಷ್ಮೀ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್, ಖಜಾಂಚಿ ಕಿಶೋರ್ ಕುಮಾರ್ ಸೇರಿದಂತೆ ಸದಸ್ಯರು ಮುಂತಾದವರು ಭಾಗವಹಿಸಿದ್ದರು.