ಚಿಕ್ಕಮಗಳೂರು: ನಗರದ ನ್ಯಾಯಾಲಯಗಳ ಸಂಕೀರ್ಣದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ.
ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ಬಳಿ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ನೂತನ ಕಟ್ಟಡ ಕಾಮಗಾರಿ 25 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಮುಂದಿನ 2 ತಿಂಗಳಲ್ಲಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಲೋಕೋಪಯೋಗಿ ಇಲಾಖೆ ಹೊಂದಿದೆ.
25 ಕೋಟಿ ರೂ.ಕಾಮಗಾರಿ: ನ್ಯಾಯಾಲಯ ಸಂಕೀರ್ಣದಲ್ಲಿ ಈಗ 25 ಕೋಟಿ ರೂ. ವೆಚ್ಚದಲ್ಲಿ 8 ಕೋರ್ಟ್ ಹಾಲ್ಗಳನ್ನು ನಿರ್ಮಿಸಲಾಗುತ್ತಿದೆ. ಬೇಸ್‌ಮೆಂಟ್‌ನೊಂದಿಗೆ 2 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಬೇಸ್‌ಮೆಂಟ್‌ನಲ್ಲಿ ದಾಖಲಾತಿಗಳನ್ನು ಇಡುವ ಕೊಠಡಿ, ನೆಲ ಅಂತಸ್ತಿನಲ್ಲಿ ದಾಖಲಾತಿಗಳ ಕೊಠಡಿ ಹಾಗೂ ಗ್ರಂಥಾಲಯ, ಮೊದಲ ಅಂತಸ್ತಿನಲ್ಲಿ 4ಕೋರ್ಟ್ ಹಾಲ್ಗಳು ಹಾಗೂ ಎರಡನೇ ಅಂತಸ್ತಿನಲ್ಲಿ 4ಕೋರ್ಟ್ ಹಾಲ್ಗಳನ್ನು ನಿರ್ಮಿಸಲಾಗಿದೆ.
ಕಾಮಗಾರಿ ಪೂರ್ಣ: ಈಗಾಗಲೇ, ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ವೆಟ್ರಿಫೈಡ್ ಟೈಲ್ಸ್ ಮತ್ತು ಗ್ರಾನೈಟ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇದೂ ಸಹ ಈಗಾಗಲೇ ಶೇ.80ರಷ್ಟು ಪೂರ್ಣಗೊಂಡಿದ್ದು, ಸ್ವಲ್ಪ ಕೆಲಸ ಮಾತ್ರ ಬಾಕಿ ಉಳಿದಿದೆ. ಇದರೊಂದಿಗೆ ಬಣ್ಣ ಹೊಡೆಯುವುದು, ಶೌಚಾಲಯಗಳ ನಿರ್ಮಾಣ ಕಾಮಗಾರಿ, ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸುವ ಕಾಮಗಾರಿ ಆಗಬೇಕಿದೆ. ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು 2 ತಿಂಗಳ ಒಳಗಾಗಿ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಗಣೇಶ್ ತಿಳಿಸಿದರು.
ರಸ್ತೆ ಕಾಮಗಾರಿಗೆ ಪ್ರಸ್ತಾವನೆ: ನ್ಯಾಯಾಲಯ ಗಳ ಸಂಕೀರ್ಣದ ಕಟ್ಟಡ ಕಾಮಗಾರಿ ಪೂರ್ಣ ಗೊಂಡರೂ ಸಹ ಕಟ್ಟಡದಲ್ಲಿ ವಾಹನಗಳ ನಿಲುಗಡೆ ಹಾಗೂ ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿಲ್ಲ. ಈ ಎರಡೂ ಕೆಲಸಗಳಿಗೆ ಲೋಕೋಪಯೋಗಿ ಇಲಾಖೆ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೂ ಅನುಮತಿ ದೊರೆತಿಲ್ಲ. ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಒಟ್ಟಾರೆ 12 ಕೋರ್ಟ್ ಹಾಲ್ಗಳ ಅವಶ್ಯಕತೆ ಇದೆ. ಆದರೆ, ಈಗ 25 ಕೋಟಿ ರೂ. ವೆಚ್ಚದಲ್ಲಿ 8 ಕೋರ್ಟ್ ಹಾಲ್ಗಳನ್ನು ನಿರ್ಮಿಸಲು ಅನುಮೋದನೆ ದೊರೆತಿದ್ದು, ಅಷ್ಟನ್ನು ಮಾತ್ರ ನಿರ್ಮಿಸಲಾಗಿದೆ. ಉಳಿದ 4 ಕೋರ್ಟ್ ಹಾಲ್ಗಳಿಗೆ ಲೋಕೋಪಯೋಗಿ ಇಲಾಖೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದೆ.
ನ್ಯಾಯಾಲಯ ಸಂಕೀರ್ಣದ ಸಮೀಪ ದಲ್ಲಿಯೇ ನ್ಯಾಯಾಧೀಶರ ವಸತಿ ಗೃಹಗಳನ್ನು ನಿರ್ಮಿಸಲು ಸಹ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2.96 ಕೋಟಿ ರೂ. ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗೂ ಸಹ ಸರ್ಕಾರದಿಂದ ಈವರೆಗೂ ಅನುಮೋದನೆ ದೊರೆತಿಲ್ಲ.