Advertisement
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಫಿಯನ್ನು ಉದ್ಯಮ ಎಂದು ಪರಿಗಣಿಸಲಾಗುತ್ತದೆ. ಬೇರೆ ಬೇರೆ ಕೈಗಾರಿಕೆಗಳಿಗೆ ಜಮೀನುಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಅದೇ ರೀತಿ ಕಾಫಿ ಬೆಳೆಗಾರರಿಗೂ ಭೂಮಿ ನೀಡಿ ಎಂದರು.
Related Articles
Advertisement
ದೇಶದ ಯಾವುದೇ ರಾಜ್ಯದಲ್ಲಿಯೂ ಮೆಣಸಿಗೆ ಎಪಿಎಂಸಿಯಲ್ಲಿ ತೆರಿಗೆ ವಿಧಿಸುವುದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಮೆಣಸಿಗೆ ಎಪಿಎಂಸಿಯಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ 1 ಕೆಜಿ ಮೆಣಸಿಗೆ 350 ರೂ. ಇದ್ದರೆ 25 ರೂ.ಗಳನ್ನು ಬೆಳೆಗಾರರು ತೆರಿಗೆ ರೂಪದಲ್ಲಿ ಕಟ್ಟುವಂತಾಗಿದೆ. ಕೂಡಲೆ ಎಪಿಎಂಸಿಯಲ್ಲಿ ಮೆಣಸಿಗೆ ವಿಧಿಸಲಾಗುತ್ತಿರುವ ತೆರಿಗೆಯನ್ನು ರದ್ದುಪಡಿಸಬೇಕೆಂಬ ಬೇಡಿಕೆ ಬೆಳೆಗಾರರದ್ದಾಗಿದೆ ಎಂದರು.
ಕಳೆದ ವರ್ಷ ಕೊಡಗಿನಲ್ಲಿ ಅತಿವೃಷ್ಟಿಯಿಂದ ಊರಿಗೆ ಊರೇ ಕೊಚ್ಚಿ ಹೋಗಿದೆ. ಆದರೂ ರಾಜ್ಯ ಸರ್ಕಾರ ಈವರೆಗೂ ಪರಿಹಾರ ನೀಡಿಲ್ಲ. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್.ನಿಂದ ಪ್ರತಿ ಹೆಕ್ಟೇರ್‌ಗೆ ಕೇವಲ 35 ಸಾವಿರ ರೂ. ನೀಡಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ 119 ಕೋಟಿ ರೂ.ಗಳು ಇದ್ದು, ಪ್ರತಿ ಹೆಕ್ಟೇರ್‌ಗೆ 18ಲಕ್ಷ ರೂ. ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
9 ವರ್ಷಗಳ ಹಿಂದೆ ತಾವು ಇಂದನ ಸಚಿವರಾಗಿದ್ದಾಗ ಪಡುಬಿದ್ರಿಯಿಂದ ಶಾಂತಿಗ್ರಾಮದವರೆಗೆ ವಿದ್ಯುತ್ ಲೈನ್ ಎಳೆಸಿದ್ದಾಗ ಪ್ರತಿ ಹೆಕ್ಟೇರ್ ಜಮೀನಿಗೆ ಅಂದೇ 17.50 ಲಕ್ಷ ರೂ. ಪರಿಹಾರ ನೀಡಿದ್ದೆ. ಆಗಲೇ ಅಷ್ಟು ಪರಿಹಾರ ನೀಡಿರುವಾಗ ಈಗ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡಲು ಕಷ್ಟವೇನು ಎಂದು ಪ್ರಶ್ನಿಸಿದರು.
ಕಾಫಿ ಮಂಡಳಿ ಕಾರ್ಯದರ್ಶಿಗಳು ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂಬ ದೂರು ಹೆಚ್ಚಾಗಿದೆ. ಈ ಹಿಂದೆಯೇ ಅವರನ್ನು ಬದಲಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಅವರು ರಾಜ್ಯ ಸರ್ಕಾರದ ಅಧಿಕಾರಿಯಾಗಿದ್ದಾರೆ. ಕೂಡಲೆ ಅವರನ್ನು ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಕೋರಲಾಗುವುದು ಎಂದರು.
ಈ ಮೂರು ಅಂಶಗಳು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟದ್ದಾಗಿರುವುದರಿಂದ ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮುಖ್ಯಮಂತ್ರಿಗಳ ಸಮಯ ಪಡೆದುಕೊಳ್ಳಲು ತಿಳಿಸಲಾಗಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಯಿಂದ ಕಾಫಿ ತೋಟಗಳನ್ನು ಹೊರಗಿಡಲಾಗಿದೆ. ಕಾಫಿ ತೋಟಗಳನ್ನೂ ಸೇರಿಸಿದರೆ ಸಣ್ಣ ಬೆಳೆಗಾರರಿಗೆ ಅನುಕೂಲವಾಗುವುದರಿಂದ ಈ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು. ಕಾಫಿಗೆ ಚಿಕೋರಿಯನ್ನು ಶೇ.49 ರಷ್ಟು ಸೇರಿಸಲು ಅವಕಾಶವಿದ್ದು, ಇದನ್ನು ಶೇ.28ಕ್ಕೆ ಇಳಿಸುವಂತೆ ಕಾಫಿ ಬೆಳೆಗಾರರು ಕೋರಿದ್ದಾರೆ. ಈ ಬಗ್ಗೆ ಎಫ್.ಎಸ್.ಎಸ್.ಎ.ಐ.ಗೆ ಪತ್ರ ಬರೆದು ಪರಿಶೀಲಿಸಲು ಕೋರಲಾಗುವುದು ಎಂದು ಹೇಳಿದರು.
ಕಳೆದ ಕೇಂದ್ರ ಸರ್ಕಾರವು ಮೆಣಸಿನ ಆಮದಿನ ಮೇಲೆ ತೆರಿಗೆಯನ್ನು ಹೆಚ್ಚಿಸಿದ್ದರಿಂದಾಗಿ ಮೆಣಸಿನ ಬೆಲೆ ಸ್ಥಿರವಾಗಿತ್ತು. ಅಕ್ರಮವಾಗಿ ದೇಶಕ್ಕೆ ಆಮದಾಗುವ ಮೆಣಸನ್ನು ತಡೆಗಟ್ಟಬೇಕಾಗಿದೆ. ಈ ವಿಚಾರವಾಗಿ ಗೃಹಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಈ ಹಿಂದಿನ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಈಗ ಹಣಕಾಸು ಸಚಿವರಾಗಿದ್ದಾರೆ. ಅವರಿಗೆ ಕಾಫಿ ಸಮಸ್ಯೆ ಕುರಿತು ಹೆಚ್ಚಿನ ಮಾಹಿತಿ ಇದೆ. ಕೇಂದ್ರದಿಂದ ಕಾಫಿ ಬೆಳೆಗಾರರಿಗೆ ಆಗಬೇಕಿರುವ ಕೆಲಸದ ಕುರಿತು ಚರ್ಚಿಸಲು ಕಾಫಿ ಬೆಳೆಗಾರರ ನಿಯೋಗವನ್ನು ಜುಲೈ ತಿಂಗಳಲ್ಲಿ ಕರೆದೋಯ್ಯಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಕುರಿತು ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಜಿಲ್ಲೆಗೆ ಹಲವು ಕೆಲಸಗಳನ್ನು ಮಾಡಲಾಗಿದೆ. ನಗರಕ್ಕೆ ಕೇಂದ್ರೀಯ ವಿದ್ಯಾಲಯವನ್ನು ಮಂಜೂರು ಮಾಡಲಾಗಿದೆ. ಅದರ ಕಟ್ಟಡ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಿಸಲಾಗುವುದು. ಇ.ಎಸ್.ಐ. ಡಿಸ್ಪೆನ್ಸರಿಯನ್ನು ಮಂಜೂರು ಮಾಡಲಾಗಿದೆ. ಸುಸಜ್ಜಿತ ಆಸ್ಪತ್ರೆ ಮಂಜೂರಾತಿಗೆ ಯತ್ನಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ರೈಲ್ವೆ ಮಾರ್ಗಗಳನ್ನು ಡಬಲ್ ಟ್ರಾಕ್ ಮಾಡಬೇಕಿದೆ. ನಗರಿಂದ ಬೆಂಗಳೂರಿಗೆ ತೆರಳುತ್ತಿರುವ ರೈಲಿನ ಸಮಯ ಕಡಿಮೆಗೊಳಿಸುವಂತೆ ಒತ್ತಡವಿದೆ. ಅದರೊಂದಿಗೆ ಹೊಸ ರೈಲನ್ನು ಓಡಿಸಲು ಕೂಡ ಪ್ರಯತ್ನಿಸಲಾಗುವುದು ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ಎನ್. ಜೀವರಾಜ್ ಉಪಸ್ಥಿತರಿದ್ದರು.