ಚಿಕ್ಕಮಗಳೂರು: ಮುಂದಿನ ಬಜೆಟ್‌ನಲ್ಲಿ ನಗರದ ರಸ್ತೆ, ಚರಂಡಿ ಮುಖ್ಯವಾಗಿ ಯುಜಿಡಿಗೆ ಪ್ರಥಮ ಆದ್ಯತೆ ನೀಡಬೇಕೆಂದು ನಗರದ ನಾಗರಿಕರು ಆಗ್ರಹಿಸಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 2020-21ರ ಬಜೆಟ್ ಪೂರ್ವಭಾವಿ ಪ್ರಥಮ ಸಭೆಯಲ್ಲಿ ನಗರ ಅಭಿವೃದ್ಧಿಗೆ ಸಲಹೆ-ಸೂಚನೆ ನೀಡುವುದಕ್ಕಿಂತ ನಗರಸಭೆ ಸಮಸ್ಯೆಗಳ ಆಹವಾಲುಗಳೆ ಸಾರ್ವಜನಿಕರಿಂದ ಕೇಳಿಬಂತು.
ಸಿವಿಲ್ ಎಂಜಿನಿಯರ್ ನಾಗೇಂದ್ರ ಮಾತನಾಡಿ, ಹಿಂದಿನ ಬಜೆಟ್ ಪೂರ್ವ ಸಭೆಯಲ್ಲಿ ತಾವು ನೀಡಿದ್ದ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆತಿದೆ, ಅಭಿನಂದನೆ. ಆದರೆ, ಸಾಕಷ್ಟು ಇನ್ನೂ ಬಾಕಿ ಇವೆ. ಹಿಂದೆ ಸಲಹೆ ನೀಡಿದಂತೆ ನಗರ ಅಭಿವೃದ್ಧಿಗೆ ಒಂದು ಮಾಸ್ಟರ್ ಪ್ಲಾನ್ ಅಳವಡಿಸಿಕೊಂಡಂತೆ ಕಾಣುತ್ತಿಲ್ಲ. ನಗರದ ರಸ್ತೆಗಳು ಎಷ್ಟುದ್ದ ಇವೆ. ಪಕ್ಕಾ ಎಷ್ಟು, ಕಚ್ಚಾ ಎಷ್ಟು ಎಂಬುದನ್ನು ಸರ್ವೆ ಮಾಡಬೇಕು. ಚರಂಡಿಗಳನ್ನು ನೀರಿನ ಹರಿವಿನ ಅಧಾರದಲ್ಲೇ ನಿರ್ಮಿಸಬೇಕು. ಇದೆಲ್ಲಕ್ಕಿಂತ ಮೊದಲು ಬಹಳ ವರ್ಷದಿಂದ ನನೆಗುದಿಗೆ ಬಿದ್ದಿರುವ ಯುಜಿಡಿಯನ್ನು ಪರೀಕ್ಷೆ ಮಾಡಿ ನಂತರ ಎಲ್ಲ ರಸ್ತೆಗಳಿಗೆ ಡಾಂಬರ್ ಹಾಕುವುದು ಒಳ್ಳೆಯದು. ಇಲ್ಲದಿದ್ದರೆ ಮತ್ತೆ ರಸ್ತೆ ಅಗೆದು ಹಾಳುಗೆಡವ ಬೇಕಾಗುತ್ತದೆ ಎಂದರು.
ನಗರದ ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿ ರಸ್ತೆಯನ್ನು ವಿಸ್ತರಿಸಲಾಯಿತು. ಅಂಗಡಿ ಕಳೆದುಕೊಂಡ ಫಲಾನುಭವಿಗಳಿಗೆ ಇನ್ನೂ ಪರಿಹಾರ ನೀಡಲಿಲ್ಲ. ಆದರೆ, ಅವರ ಅಂಗಡಿ ಮುಂಭಾಗದಲ್ಲೇ ಈಗ ಹೂವು, ಹಣ್ಣು, ತರಕಾರಿ ಅಂಗಡಿಗಳನ್ನಿಟ್ಟು ರಸ್ತೆಯಲ್ಲೇ ಮಾರಾಟ ಮಾಡುತ್ತಾ ಸಂಚಾರಕ್ಕೂ ಅಡಚಣೆ ಉಂಟು ಮಾಡುತ್ತಿದ್ದಾರೆ. ಇದರಿಂದ ರಸ್ತೆ ವಿಸ್ತರಣೆ ಉದ್ದೇಶ ಈಡೇರಿದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ನಗರಸಭೆಯಿಂದ ಬೀದಿ ಬದಿ ಮಾರುವವರಿಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಿಕೊಡಿ. ಇಲ್ಲವೇ ರಸ್ತೆ ಬದಿಯಲ್ಲಿ ಮಾರುವುದನ್ನು ತಡೆಯಿರಿ ಎಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ವಸಂತಕುಮಾರ್ ಮಾತನಾಡಿ, ನಗರದ ಎಂಜಿ ರಸ್ತೆ, ಅಂಬೇಡ್ಕರ್ ರಸ್ತೆಯಲ್ಲಿ ಅಳವಡಿಸಿದ್ದ ಕಾಲುದಾರಿ ಮಾರ್ಗದ ಸ್ಲ್ಯಾಬ್‌ಗಳೆಲ್ಲಾ ಹಾಳಾಗಿದ್ದು, ಜನ ಗುಂಡಿಗೆ ಬೀಳುತ್ತಿದ್ದಾರೆ. ಒಮ್ಮೆ ಶಾಶ್ವತ ಕೆಲಸ ಮಾಡಿಸಲು ಏಕೆ ಸಾಧ್ಯವಾಗಲಿಲ್ಲ. ಮುಂದೆ ಸರಿಪಡಿಸಿ ಎಂದರು.
ದೀಪ ನರ್ಸಿಂಗ್ ಹೋಂನಿಂದ ಬೈಪಾಸ್ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದ್ದು, ಅದನ್ನು ವಿಸ್ತರಿಸಬೇಕು. ಕಿರಿದಾಗಿರುವ ಲಕ್ಷ್ಮೀಶ ನಗರದ ಮೊದಲ ತಿರುವಿನ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿ ಪಡಿಸಬೇಕು. ಪೌರಕಾರ್ಮಿಕರಿಗೆ ನಿವೇಶನ ನೀಡಿ ಈಗಿರುವ ಹಳೆ ಮನೆಗಳನ್ನು ಅವರ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಧರ್ಮೇಶ್ ಮಾತನಾಡಿ, ಕೋಟೆ ಕೆರೆ, ದಂಟರಮಕ್ಕಿ ಕೆರೆ ಅಭಿವೃದ್ಧಿಗೆ ಪ್ರತಿವರ್ಷ ಹಣ ಸುರಿಯಲಾಗುತ್ತಿದೆ. ಆದರೆ, ಕೆರೆಯಲ್ಲಿರುವ ಸೊಪ್ಪನ್ನು ಏಕೆ ಸಂಪೂರ್ಣ ತೆರವು ಮಾಡಿಲ್ಲ ಎಂದು ಕೇಳಿದರು. ಡಿಎಸ್‌ಎಸ್ ಚಂದ್ರಪ್ಪ, ನಗರದಲ್ಲಿ ಅಂಬೇಡ್ಕರ್ ರಸ್ತೆ ಎಂದು ದಾಖಲೆಯಲ್ಲಿದ್ದರೂ ನಗರಸಭೆಯಿಂದ ಮಾರ್ಕೆಟ್ ರಸ್ತೆ ಎಂದೇ ನಮೂದು ಮಾಡಲಾಗುತ್ತಿದೆ. ಹೆರಿಗೆ ಆಸ್ಪತ್ರೆ ಮುಂದೆ ಇದ್ದ ಅಂಬೇಡ್ಕರ್ ವೃತ್ತವನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮಣಿ ಮಾತನಾಡಿ, ಸಂತೆ ಮೈದಾನದ ಕೋಳಿ, ಮೀನು ಅಂಗಡಿಗಳ ಬಳಿ ದುರ್ನಾತ ಬೀರುತ್ತಿದ್ದು ಅಲ್ಲಿ ನೀರಿನ ವ್ಯವಸ್ಥೆ ಮಾಡಿ ಸ್ವಚ್ಛತೆ ಕಾಪಾಡುವಂತೆ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು. ನಗರಸಭೆ ಆಯುಕ್ತ ಪರಮೇಶಿ, ವ್ಯವಸ್ಥಾಪಕಿ ಲತಾಮಣಿ, ಪರಿಸರ ಎಂಜಿನಿಯರ್ ರಕ್ಷಿತ್‌ಗೌಡ, ಕಂದಾಯ ಅಧಿಕಾರಿ ಬಸವರಾಜ್, ರಮೇಶ್ ನಾಯ್ಡು ಹಾಜರಿದ್ದರು.