ಚಿಕ್ಕಮಗಳೂರು: ಕಾಫಿನಾಡಲ್ಲಿ ಭದ್ರಾ ನದಿ ಬಳಿಯೇ ಬೃಹತ್ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ, ಮೇಕೆಗಳನ್ನು ಬಲಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಬಳಿ ಈ ಘಟನೆ ನಡೆದಿದ್ದು, ನದಿಯಲ್ಲಿ ರುಂಡ-ಮುಂಡ ಬೇರ್ಪಟ್ಟ ಕುರಿ-ಮೇಕೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಹೊರನಾಡಿಗೆ ಹೋಗುವ ಮುಖ್ಯರಸ್ತೆ ಬಳಿಯೇ ಈ ಕೃತ್ಯ ನಡೆದಿದ್ದು, ವಾಮಾಚಾರಕ್ಕೆ ಬಳಸಿದ್ದ ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ ನದಿ ದಡದಲ್ಲಿ ಪತ್ತೆಯಾಗಿವೆ ಹಾಗೂ ಭದ್ರಾ ನದಿಯಲ್ಲಿ 5-6 ಕುರಿ-ಮೇಕೆಗಳ ಶವ ಕೂಡಾ ಪತ್ತೆಯಾಗಿದೆ.
ರಾತ್ರಿ ವೇಳೆ ನಡೆದಿರುವ ವಾಮಾಚಾರದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ವಾಮಾಚಾರದ ರಹಸ್ಯ ಭೇದಿಸಲು ಪೊಲೀಸರು ಮುಂದಾಗಿದ್ದು, ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನದಿಯಿಂದ ಮೇಕೆ-ಕುರಿಗಳ ಶವ ಹೊರಕ್ಕೆ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.