Advertisement

ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

12:09 PM Jul 10, 2019 | Naveen |

ಚಿಕ್ಕಮಗಳೂರು: ನಗರದಲ್ಲಿ ಮಂಗಳವಾರ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಆಪರೇಷನ್‌ ಕಮಲ, ಕುದುರೆ ವ್ಯಾಪಾರ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ ಕಾರಿದರೆ, ನಿಮಗೆ ಬಹುಮತವಿಲ್ಲ. ಕಿಂಚಿತ್ತಾದರೂ ಗೌರವವಿದ್ದರೆ ತಕ್ಷಣವೇ ಕುರ್ಚಿ ಬಿಟ್ಟು ಹೋಗಿ ಎಂದು ಬಿಜೆಪಿ ಆಗ್ರಹಿಸಿತು.

ನಗರದ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಾ‌್ಯಕರ್ತರು ಪ್ರತಿಭಟನೆ ನಡೆಸಿದ್ದಲ್ಲದೇ, ತಮ್ಮದೇ ಪಕ್ಷದ ಶಾಸಕರ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿವೆ ಎಂದು ಟೀಕಿಸಿದರು.

ನಗರದ ಆಜಾದ್‌ ಪಾರ್ಕ್‌ ಸರ್ಕಲ್ನಲ್ಲಿ ವ್ಯಕ್ತಿ ಯೊಬ್ಬರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಖವಾಡವಿಟ್ಟು ಕೂರಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ರಾಜೀನಾಮೆ ಕೊಡದೆ ಕುರ್ಚಿಗೆ ಅಂಟಿಕೊಂಡಿದ್ದೀರಿ. ತಕ್ಷಣವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಬಿಜೆಪಿಯಿಂದ ರಾಜಕೀಯ ಅಭದ್ರತೆ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಅಭದ್ರತೆ ಸೃಷ್ಟಿಸುತ್ತಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್‌ ಆರೋಪಿಸಿದರು.

Advertisement

ವಿಧಾನ ಪರಿಷತ್‌ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಮತದಾರರು ಶಾಸಕರಿಗೆ 5ವರ್ಷಕ್ಕೆ ಅಧಿಕಾರ ನೀಡಿದ್ದಾರೆ. ಆದರೆ, ರಾಜೀನಾಮೆ ನೀಡುವ ಮೂಲಕ ಜನರಿಗೆ ವಂಚನೆ ಮಾಡಬಾರದು. ರಾಜೀನಾಮೆ ನೀಡಿರುವ ಎಲ್ಲ ಶಾಸಕರು ವಾಪಸ್ಸಾಗಬೇಕೆಂದು ಆಗ್ರಹಿಸಿದರು.

ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ಪಕ್ಷಕ್ಕೆ ದ್ರೋಹ ಮಾಡಿ ಹೋಗಿರುವ ಶಾಸಕರು ರಾಜಕೀಯ ವ್ಯಭಿಚಾರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿದರು. ತಾಲೂಕು ಕಚೇರಿ ಆವರಣದಿಂದ ಹನುಮಂತಪ್ಪ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು.

ಮುಖಂಡರಾದ ಎ.ಎನ್‌.ಮಹೇಶ್‌, ರೇಖಾ ಹುಲಿಯಪ್ಪಗೌಡ, ಪ್ರೇಮಾಮಂಜುನಾಥ್‌, ಪ್ರಕಾಶ್‌, ಕೆ.ವಿ.ಶಿವಕುಮಾರ್‌, ನಿಸಾರ್‌ ಅಹಮದ್‌, ರಸೂಲ್ ಖಾನ್‌, ಸಿಲ್ವಸ್ಟರ್‌, ಜಿ.ಬಿ.ಪವನ್‌, ಅತಿಕ್‌ ಖೈಸರ್‌, ಎಚ್.ಎಸ್‌.ಪುಟ್ಟಸ್ವಾಮಿ, ರೂಬೆನ್‌ ಮೊಸೆಸ್‌, ಸುರೇಖಾ ಸಂಪತ್‌ ಮತ್ತಿತರರು ಹಾಜರಿದ್ದರು.

ಗೌರವ ಇದ್ದರೆ ರಾಜೀನಾಮೆ ಕೊಡಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸ್ವಲ್ಪವಾದರೂ ಗೌರವ ವಿದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎಚ್.ಡಿ.ತಮ್ಮಯ್ಯ ಆಗ್ರಹಿಸಿದರು.

ಎಚ್.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿ ಯಾಗಿದ್ದರೆ ತಮ್ಮ ಕ್ಷೇತ್ರಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿಯಿಂದ ತಕ್ಷಣ ರಾಜೀನಾಮೆ ಕೊಡಿಸಲಿ ಎಂದರು.

ಮುಖಂಡರಾದ ಸಿ.ಆರ್‌.ಪ್ರೇಮ್‌ಕುಮಾರ್‌, ವರಸಿದ್ಧಿ ವೇಣುಗೋಪಾಲ್, ಬಿ.ರಾಜಪ್ಪ, ಸಿ.ಎಚ್.ಲೋಕೇಶ್‌, ದೇವರಾಜ ಶೆಟ್ಟಿ, ಬಿ.ಜಿ.ಸೋಮಶೇಖರ್‌, ಎಚ್.ಎಸ್‌.ಪುಟ್ಟೇಗೌಡ, ವೆಂಕಟೇಶ್‌, ಮುತ್ತಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.