ಹೊಸಪೇಟೆ: ಭಕ್ತರ ಸುರಕ್ಷತೆ ದೃಷ್ಠಿಯಿಂದ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಪಟ್ಟದ ಆನೆ ಲಕ್ಷ್ಮೀಯಿಂದ ಭಕ್ತರು ಕೊಂಚ ಅಂತರ ಕಾಯ್ದುಕೊಳ್ಳುವಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಂಡಿದೆ.
ಕಳೆದ ನಾಲ್ಕೈದು ದಿನಗಳಿಂದ ಇಲಾಖೆ ಈ ಕ್ರಮ ಕೈಗೊಂಡಿದ್ದು, ಭಕ್ತರು ಆನೆ ಬಳಿ ಸುಳಿಯದಂತೆ ಅಂತರ ಕಾಯ್ದುಕೊಳ್ಳಲಾಗಿದೆ.
ವಿರೂಪಾಕ್ಷನ ದರ್ಶನಕ್ಕೆ ಭಕ್ತರು ಆಗಮಿಸುತ್ತಿದಂತೆ ಪ್ರವೇಶ ದ್ವಾರದಲ್ಲೇ ಇದ್ದ ಆನೆಯನ್ನು ಕಂಡೊಡನೆ ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಭಕ್ತರು, ಮುಗಿ ಬೀಳುತ್ತಿದ್ದರು. ಅಲ್ಲದೆ, ಬಾಳೆ ಹಣ್ಣನ್ನು ಆನೆಗೆ ತಿನ್ನಿಸಲು ಮುಂದಾಗುತ್ತಿದ್ದರು. ಇದರಿಂದ ಆನೆಗೆ ಕಿರಿಕಿರಿ ಉಂಟಾಗುತ್ತಿತ್ತು.
ಇಡೀ ದಿನ ಭಕ್ತರು ನೀಡುವ ಬಾಳೆ ಹಣ್ಣನ್ನು ಆನೆ ಸೇವಿಸುವುದಿಲ್ಲ, ಅದು ತಿನ್ನದೇ ಆ ಸ್ಥಳದಲ್ಲಿ ಬಿಸಾಡುವುದರಿಂದ ಇಡೀ ವಾತವರಣ ಗಲೀಜಾಗುತ್ತಿತ್ತು. ಜತೆಗೆ ಪ್ಲಾಸ್ಟಿಕ್ ಚೀಲಗಳು ಹರಿದಾಡುತ್ತಿದ್ದವು.
ಬಾಳೆ ಹಣ್ಣನ್ನು ಪ್ರವೇಶ ದ್ವಾರದಲ್ಲಿ ಸಂಗ್ರಹಿಸಿಟ್ಟು, ಅವುಗಳನ್ನು ಕೋತಿಗಳಿಗೆ ನೀಡಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ಉದಯವಾಣಿಗೆ ತಿಳಿಸಿದ್ದಾರೆ.