Advertisement

ಮಕ್ಕಳು ಸದೃಢರಾಗಿದ್ದರೆ ಸ್ವಾಸ್ಥ್ಯ ಸಮಾಜ

06:49 PM Dec 09, 2019 | Naveen |

ಚಿಕ್ಕಮಗಳೂರು: ಹುಟ್ಟುವ ಮಕ್ಕಳು ಆರೋಗ್ಯವಂತ ಹಾಗೂ ಸದೃಢರಾಗಿ ಹುಟ್ಟಬೇಕೆಂಬ ದೃಷ್ಟಿಯಿಂದ ಸರ್ಕಾರ ಮಾತೃವಂದನ, ಮಾತೃಶ್ರೀ, ಭಾಗ್ಯಲಕ್ಷ್ಮೀಯಂತಹ ಮಹತ್ವಪೂರ್ಣ ಯೋಜನೆಗಳನ್ನು ಮಹಿಳೆಯರಿಗೆ ನೀಡುತ್ತಿದೆ ಎಂದು ಗ್ರಾಪಂ ಸದಸ್ಯ ವಸ್ತಾರೆ ರವಿ ಹೇಳಿದರು.

Advertisement

ಜಿಪಂ ಹಾಗೂ ಗ್ರಾಪಂ ಸಹಭಾಗಿತ್ವದೊಂದಿಗೆ ವಸ್ತಾರೆ ಶಾಲೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಮಾತೃವಂದನಾ, ಮಾತೃಶ್ರೀ, ಭಾಗ್ಯಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಇಂತಹ ಯೋಜನೆಗಳನ್ನು ಬಳಸಿಕೊಂಡು ಮುಂದೆ ಹುಟ್ಟುವ ಮಕ್ಕಳು ಆರೋಗ್ಯಪೂರ್ಣವಾಗಿದ್ದರೆ ಸ್ವಸ್ಥ ಸಮಾಜ ಸೃಷ್ಟಿಸಬಹುದಾಗಿದೆ. ಮಹಿಳೆಯರು ಈ ಸಂದರ್ಭದಲ್ಲಿ ಹಣ್ಣು ಹಂಪಲು, ತರಕಾರಿ, ದವಸ,ಧಾನ್ಯ ಬೇಳೆಕಾಳು ಉಪಯೋಗಿಸಿದರೆ ಹುಟ್ಟುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ ಎಂಬ ಉದ್ದೇಶ ಸರ್ಕಾರದ್ದಾಗಿದೆ ಎಂದರು.

ಅಂಗನವಾಡಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ಸರ್ಕಾರದ ಈ ಯೋಜನೆಗಳ ಬಗ್ಗೆ ಡಿ.2ರಿಂದ 8ರವರೆಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದೀರಿ. ಯಾವುದೇ ಸರ್ಕಾರ ನೀಡುವ ಕಾರ್ಯಕ್ರಮಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹಳಷ್ಟು ಮಹಿಳೆಯರು ಬಂದಿದ್ದೀರಿ ನಗರಸಭೆ, ಪಪಂ, ಗ್ರಾಪಂನ ಅಂಗನವಾಡಿ ಕೇಂದ್ರಗಳಲ್ಲಿ ಆಯಾ ವ್ಯಾಪ್ತಿಯಲ್ಲಿರುವ ಅನುಕೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿ. ಈಗ ನೀಡಿರುವ ಬಾಂಡ್‌ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಹೇಳಿದರು.

ಮೇಲ್ವಿಚಾರಕಿ ಲೀಲಾವತಿ ಮಾತನಾಡಿ, ದೇಶದಲ್ಲಿ ಬಹಳಷ್ಟು ಕಡೆ ಬಡತನವಿದೆ ಅದಕ್ಕೆ ಪೂರಕವಾಗಿ ಮಹಿಳೆಯರಿಗೆ ಪೌಷ್ಟಿಕ ಆಹಾರ ನೀಡಲು ಮಾತೃವಂದನಾ ಯೋಜನೆ ಜಾರಿಯಲ್ಲಿದೆ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ನೌಕರಳಾಗಿಲ್ಲದ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಇದರೊಂದಿಗೆ ಮೊದಲನೆ ಗರ್ಭಿಣಿಯಾಗಿರಬೇಕು. ಇಂತಹವರಿಗೆ ಮೂರು ಹಂತದಲ್ಲಿ ಸೌಲಭ್ಯ ನೀಡಲಾಗುತ್ತದೆ ಎಂದರು.

ಗರ್ಭಿಣಿ ಎಂದು ತಿಳಿದ ಕೂಡಲೆ ಅಂಗನವಾಡಿಗೆ ಬಂದು ದಾಖಲಾತಿ ಮಾಡಿಕೊಂಡರೆ ಮೊದಲ ಹಂತವಾಗಿ 1 ಸಾವಿರ ರೂ., 6 ತಿಂಗಳ ನಂತರ 2 ಸಾವಿರ, ಮಗು ಹುಟ್ಟಿದ ನಂತರ 2 ಸಾವಿರ ಹೀಗೆ 5 ಸಾವಿರ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.

Advertisement

ಮಾತೃಶ್ರೀ ಯೋಜನೆಯಲ್ಲಿ ಗರ್ಭಿಣಿಯಾಗಿರುವಾಗ 3 ಸಾವಿರ ರೂ. ಮಗು ಹುಟ್ಟಿದ ನಂತರ 3 ಸಾವಿರ ರೂ. ನೀಡಲಾಗುತ್ತದೆ. ಇದಕ್ಕೆ ಬಿಪಿಎಲ್‌ ಕಾರ್ಡ್‌ ಕಡ್ಡಾಯವಾಗಿರುತ್ತದೆ. ಭಾಗ್ಯ ಲಕ್ಷ್ಮೀ ಯೋಜನೆಗೂ ಬಿಪಿಎಲ್‌ ಕಾರ್ಡ್‌ ಕಡ್ಡಾಯವಾಗಿದ್ದು, ಒಂದು ಕುಟುಂಬಕ್ಕೆ ಎರಡು ಮಕ್ಕಳಿಗೆ ಸೌಲಭ್ಯ ನೀಡುತ್ತೇವೆ ಎಂದು ಮಾಹಿತಿ ನೀಡಿದರು.

ಮೂಗ್ತೀ ಹಳ್ಳಿಯಿಂದ ಭೂತನಕಾಡು ಗ್ರಾಮದವರೆಗೂ 150ಕ್ಕೂ ಹೆಚ್ಚು ಮಹಿಳೆಯರು ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ರವಿಕುಮಾರ್‌, ಪಾರ್ವತಮ್ಮ, ಸೋಮಶೇಖರ್‌, ಪಿಡಿಒ ಸುಮಾ, ಕಾರ್ಯದರ್ಶಿ ಉಷಾ ಯಶೋಧಾ, ನಾಗವೇಣಿ, ಸುಜಾತಾ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next