Advertisement
ಚಿಕ್ಕಮಗಳೂರು: ಬಾಸೂರು ಅಮೃತ ಮಹಲ್ ಕಾವಲ್ ಕೃಷ್ಣಮೃಗ ಸಂರಕ್ಷಣಾ ಪ್ರದೇಶದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ.
Related Articles
Advertisement
ಇತ್ತೀಚೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ರಚಿಸಲಾಗಿದೆ. ಇದರ ಸದಸ್ಯರಾಗಿ ಅಜ್ಜಂಪುರದ ಅಮೃತ ಮಹಲ್ ಸಂವರ್ಧನ ಕೇಂದ್ರದ ಉಪ ನಿರ್ದೇಶಕರು, ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಡೂರು ವಲಯ ಅರಣ್ಯಾಧಿಕಾರಿ, ಸಹಾಯಕ ಕೃಷಿ ನಿರ್ದೇಶಕರು, ದೊಡ್ಡ ಬಾಸೂರು ಗ್ರಾಪಂ ಅಧ್ಯಕ್ಷರು ಹಾಗೂ ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್, ನ್ಯಾಯವಾದಿ ಬಿ.ವಿ. ದಿನೇಶ್ ಕುಮಾರ್, ವನ್ಯಜೀವಿ ಛಾಯಾಗ್ರಾಹಕ ಕೆ.ಎನ್. ಪ್ರಶಾಂತ್ ಅವರಿದ್ದಾರೆ.
ಬಾಸೂರು ಕಾವಲ್ ಹಿನ್ನೆಲೆ: ಬಾಸೂರು ಕಾವಲ್ ಅನ್ನು ಉಳಿಸುವಂತೆ ಪರಿಸರಾಸಕ್ತರು ಸಲ್ಲಿಸಿದ್ದ ಮನವಿ ಸ್ವೀಕರಿಸಿದ ರಾಜ್ಯ ಸರ್ಕಾರ ಇದನ್ನು ಜೈವಿಕ ಪರಿಸರ ಸಂರಕ್ಷಣಾ ಪ್ರದೇಶವೆಂದು ಘೋಷಿಸಿ, ನಿರ್ವಹಣಾ ಸಮಿತಿ ರಚಿಸಿತ್ತು. ನ.5 ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವಲ್ ಸಂರಕ್ಷಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಸೂಕ್ತ ವರದಿ ತಯಾರಿಸಿ ಆಡಳಿತಾತ್ಮಕ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
ಆಡಳಿತಾತ್ಮಕ ಯೋಜನೆ ರೂಪಿಸುವ ಮುನ್ನ ಅಮೃತ ಮಹಲ್ ಕಾವಲ್ ಬಗ್ಗೆ ವೈಜ್ಞಾನಿಕ ವರದಿಯೊಂದನ್ನು ಸಿದ್ಧಪಡಿಸಲು ಆಲೋಚಿಸಲಾಗಿದ್ದು, ಇದನ್ನು ತಜ್ಞರ ಸಮಿತಿ ಮೂಲಕ ಮಾಡಿಸಲು ಯೋಚಿಸಲಾಗಿದೆ.
ಪರಿಸರಾಸಕ್ತರ ಪ್ರಕಾರ ಹುಲ್ಲುಗಾವಲು ಈಗಾಗಲೇ ಅಲ್ಲಲ್ಲಿ ಒತ್ತುವರಿಯಾಗಿದೆ. ಇಲ್ಲಿರುವ ಭೂ ವಿವಾದಗಳನ್ನು ಪರಿಹರಿಸಬೇಕಾಗಿದೆ. ಅಮೃತ ಮಹಲ್ ತಳಿ ಹೊರತುಪಡಿಸಿ ಉಳಿದಂತೆ ಪ್ರತಿನಿತ್ಯ ಮೇಯಲು ಬರುವ ಕುರಿಮಂದೆಗಳನ್ನು ಹಾಗೂ ಇತರೆ ಜಾನುವಾರುಗಳನ್ನು ತಡೆಯಬೇಕು. ಅಕ್ರಮ ಬೇಟೆ ನಡೆಸುವುದು ಮತ್ತು ಉರುಳು ಹಾಕುವುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ರಕ್ಷಣಾ ಸಿಬ್ಬಂದಿಯನ್ನು ನೇಮಿಸುವುದು ಹಾಗೂ ಯಾವುದೇ ರೀತಿ ಕೃಷಿಗೆ ಅವಕಾಶ ನೀಡಬಾರದೆಂದು ತಿಳಿಸಿ, ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ಸಂಬಳ ಮತ್ತು ಇತರೆ ಸೌಲಭ್ಯ ನೀಡಲು ಸಲಹೆಗಳು ಕೇಳಿಬಂದವು.
ಈ ಹುಲ್ಲುಗಾವಲಿನಲ್ಲಿ ಅನಗತ್ಯವಾಗಿ 10 ಕೆರೆಗಳನ್ನು ನಿರ್ಮಿಸಲಾಗಿದೆ. ಮತ್ತೆ ಯಾವುದೇ ರೀತಿಯಲ್ಲೂ ಹುಲ್ಲುಗಾವಲನ್ನು ಕೆತ್ತುವ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರದ ಸಭೆಯಲ್ಲಿ ಬಾಸೂರು ಕಾವಲನ್ನು ಅದರ ನೈಸರ್ಗಿಕ ಪರಿಸರದಲ್ಲಿ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಮಿತಿ ರಚನೆ ಮತ್ತು ವೈಜ್ಞಾನಿಕ ಅಧ್ಯಯನ ಮಾಡಲು ಆಲೋಚಿಸಲಾಗಿದೆ.