Advertisement

ಚಾರಣಕ್ಕೆ ಹೆಸರಾದ ಬಂಡೆಕಲ್ಲು ಗುಡ್ಡ

01:00 PM Jan 31, 2020 | Naveen |

ಚಿಕ್ಕಮಗಳೂರು: ಕಾಫಿಗೆ ಹೆಸರುವಾಸಿಯಾದ ಚಿಕ್ಕಮಗಳೂರು ಜಿಲ್ಲೆಯ ಮನಮೋಹಕ ನಿಸರ್ಗ ಸೌಂದರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಹಸಿರು ಸೀರೆ ಹೊದ್ದುಕೊಂಡಿರುವ ಇಲ್ಲಿನ ಭೂ ರಮೇಯನ್ನು ಎಷ್ಟು ನೋಡಿ ಆನಂದಿಸಿದರೂ ಮನಸ್ಸು ದಣಿಯುವುದಿಲ್ಲ. ಆದರೆ, ಇಲ್ಲಿನ ಕೆಲ ಪ್ರವಾಸಿ ತಾಣಗಳು ಇನ್ನೂ ಬೆಳಕಿಗೆ ಬಂದಿಲ್ಲ. ಅದರಲ್ಲಿ ಚಾರಣಕ್ಕೆ ಹೆಸರಾದ ಜಕ್ಕನಹಳ್ಳಿಯ ಬಂಡೆಕಲ್ಲು ಗುಡ್ಡವೂ ಒಂದು.

Advertisement

ಚಿಕ್ಕಮಗಳೂರು ಹಾಗೂ ಮಲ್ಲಂದೂರು ನಡುವಿನ ದಾರಿಯಲ್ಲಿ ಜಕ್ಕನಹಳ್ಳಿ ಬಂಡೆಕಲ್ಲು ಗುಡ್ಡವಿದೆ. ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಗುಡ್ಡ ಚಾರಣಕ್ಕೆ ಹೆಸರುವಾಸಿಯಾಗಿದೆ. ಟ್ರಕ್ಕಿಂಗ್‌ ಮಾಡಬೇಕು. ಪ್ರಕೃತಿ ಸೌಂದರ್ಯ ಸವಿಯಬೇಕು ಅಂದುಕೊಂಡವರು ಈ ಗುಡ್ಡಕ್ಕೊಮ್ಮೆ ಭೇಟಿ ನೀಡಬೇಕು. ಈ ಬೃಹತ್‌ ಬಂಡೆ ನೆಲಮಟ್ಟದಿಂದ ಸುಮಾರು 4000-4500 ಅಡಿ ಎತ್ತರದಲ್ಲಿದೆ.

ಬಂಡೆ ಮೇಲೆ ನಿಂತು 360 ಡಿಗ್ರಿಯಲ್ಲಿ ಕಣ್ಣಿನ ದೃಷ್ಟಿ ಎತ್ತ ಹಾಯಿಸಿದರೂ ಕಾಣೋದು ಹಸಿರು ಹೊದ್ದ ಪ್ರಕೃತಿ ಸೌಂದರ್ಯ. ಅಷ್ಟೇ ಅಲ್ಲ, ಬೆಟ್ಟ ಹತ್ತುವುದು ಸಾಹಸವೇ. ಜಕ್ಕನಹಳ್ಳಿಯಿಂದ ಮೂರು ಕಿ.ಮೀ. ದೂರದ ಈ ಬೆಟ್ಟಕ್ಕೆ ಕಡಿದಾದ ಕಲ್ಲು-ಮಣ್ಣು ಕೂಡಿರುವ ರಸ್ತೆಯಲ್ಲಿ ನಡೆದು ಸಾಗಬೇಕು.

ಬಂಡೆಯ ಮೇಲೆ ಏರಿ ನಿಂತರೆ ಯಾವುದೋ ಪ್ರಕೃತಿ ದ್ವೀಪದ ಮೇಲೆ ನಿಂತ ಅನುಭವವಾಗುತ್ತದೆ. ಸುತ್ತಲ ಪರಿಸರ ಮಂಜು ಮುಸುಕಿದ ವಾತಾವರಣದ ಬೆಳು¾ಗಿಲ ದೃಶ್ಯಗಳು ಕಣ್ಮುಂದೆ ಬರುತ್ತವೆ. ಬೀಸೋ ತಣ್ಣನೆ ಗಾಳಿ, ಸೂರ್ಯನ ರಶ್ಮಿ ಪ್ರಕೃತಿ ಮಾತೆಗೆ ಮಂಗಳಾರತಿ ಮಾಡುತ್ತಿರುವಂತೆ ಕಂಡು ಬರುತ್ತದೆ.

ಇದೆಲ್ಲದರ ನಡುವೆ ಬೆಟ್ಟವೇರಿದ ಆಯಾಸವನ್ನು ಬೀಸೋ ತಣ್ಣನೆ ಗಾಳಿ ದೂರವಾಗಿಸಿ ಬಿಡುತ್ತದೆ. ಬೆಟ್ಟದ ತುತ್ತತುದಿಗೆ ಏರಿದಾಗ ಇನ್ನೇನು ಆಕಾಶಕ್ಕೆ ಮೂರೇ ಗೇಣು ಅನ್ನೋ ಅನುಭವ ಆಗುತ್ತದೆ. ಜಿಲ್ಲೆಯ ನಿಸರ್ಗ ಮಡಿಲಲ್ಲಿ ಚಾರಣ ನಡೆಸಲು ರಾಜ್ಯ, ಹೊರ ರಾಜ್ಯಗಳಿಂದ ನೂರಾರು ಮಂದಿ ವಾರದ ಕೊನೆಯಲ್ಲಿ ಬರುತ್ತಾರೆ. ಅಂತಹವರಿಗೆ ಇದು ಹೇಳಿ ಮಾಡಿಸಿದಂತಿದೆ. ಆದರೆ, ಅನೇಕ ಪ್ರವಾಸಿಗರಿಗೆ ಈ ಗುಡ್ಡದ ಪರಿಚಯವೇ ಇಲ್ಲದಂತಾಗಿದೆ.

Advertisement

ಅನೇಕ ಬಾರಿ ಚಿಕ್ಕಮಗಳೂರಿಗೆ ಬಂದಿರಬಹುದು. ಆದರೆ, ಈ ಜಾಗ ನೋಡಿರೋದು ಅನುಮಾನ. ಕಾಫಿ ನಾಡಿಗೆ ಬಂದಾಗ ಮಲೆನಾಡಿನ ಎಲೆಮರೆ ಕಾಯಿಯಂತಿರುವ ಜಕ್ಕನಹಳ್ಳಿಯ ಬಂಡೆಕಲ್ಲು ಗುಡ್ಡಕ್ಕೆ ಹೋಗದೇ ಇದ್ದರೆ ಖಂಡಿತ ಏನೋ ನಷ್ಟವಾದಂತಾಗುತ್ತದೆ.

ಜಕ್ಕನಹಳ್ಳಿಯ ಬಂಡೆಕಲ್ಲು ಗುಡ್ಡ ಅನೇಕ ಪ್ರವಾಸಿಗರಿಗೆ ತಿಳಿದಿಲ್ಲ. ಜಿಲ್ಲೆಗೆ ಬರುವ ಪ್ರವಾಸಿಗರು ಮುಳ್ಯಯ್ಯನಗಿರಿ, ಝರಿಫಾಲ್ಸ್‌, ಕೆಂಮಣ್ಣುಗುಂಡಿ, ಹೊನ್ನಮ್ಮನಹಳ್ಳ ಮುಂತಾದ ಪ್ರದೇಶಗಳಿಗೆ ಮಾತ್ರ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾರೆ. ಪ್ರವಾಸಿಗರಿಗೆ ಪರಿಚಯವೇ ಇಲ್ಲದ ಇಂತಹ ಅನೇಕ ಪ್ರವಾಸಿ ತಾಣಗಳಿದ್ದು, ಪ್ರವಾಸೋದ್ಯಮ ಇಲಾಖೆ ಅವುಗಳನ್ನು ಪರಿಚಯಿಸುವ ಕೆಲಸ ಮಾಡಬೇಕು.
ಪ್ರಕಾಶ್‌, ಜಕ್ಕನಹಳ್ಳಿ

ಜಕ್ಕನಹಳ್ಳಿಯ ಬಂಡೆಕಲ್ಲು ಗುಡ್ಡ ಅತ್ಯಂತ ಸುಂದರ ಪ್ರವಾಸಿ
ತಾಣ. ಬೆಟ್ಟವೇರಿ ಸುತ್ತಲ ಪರಿಸರ ನೋಡುತ್ತಿದ್ದಂತೆ ಆಯಾಸವೆಲ್ಲ ಮಾಯವಾಗಿ ಮನಸ್ಸಿಗೆ ಮುದ ನೀಡುತ್ತದೆ.
ಭಾಗ್ಯಾ,
ಪ್ರವಾಸಿಗರು

ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next