ಚಿಕ್ಕಮಗಳೂರು: ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿದ್ದು ಜಿಲ್ಲೆ ಐತಿಹಾಸಿಕ ಕೆರೆಗಳಾದ ಮದಗದ ಕೆರೆ ಮತ್ತು ಅಯ್ಯನ ಕೆರೆ ಕೋಡಿ ಬಿದ್ದಿವೆ.
ಈ ಎರಡು ಕೆರೆಗಳು ಇತಿಹಾಸವನ್ನು ಹೊಂದಿದ್ದು ಮದಗದ ಕೆರೆ ಕೋಡಿ ಬಿದ್ದ ಬಳಿಕ ಅಯ್ಯನ ಕೆರೆ ಕೋಡಿ ಬಿಳುವುದು ಎಂಬ ವಾಡಿಕೆಯಿದ್ದು, ಈ ಬಾರಿಯೂ ನಡೆದಿದೆ. ಮೊನ್ನೆ ಮದಗದ ಕೆರೆ ಕೋಡಿ ಬಿದಿದ್ದರೆ ಇಂದು ಅಯ್ಯನಕೆರೆ ಕೋಡಿ ಬಿದ್ದಿದೆ. ಸಖರಾಯಪಟ್ಟದ ಸಮೀಪದ ಅಯ್ಯನಕೆರೆ ಕೋಡಿ ಬಿದ್ದಿದ್ದು ಕೋಡಿ ಬಿದ್ದ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದೆ. ಎರಡು ಬೃಹತ್ ಕೆರೆಗಳು ಕೋಡಿ ಬಿದ್ದಿರುವ ಹಿನ್ನಲೆಯಲ್ಲಿ ಬಯಲುಸೀಮೆ ಜನರು ಸಂತಸಗೊಂಡಿದ್ದಾರೆ
ಮದಗದ ಕೆರೆ ಕೋಡಿ ಬಿದ್ದು ಕೋಡಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಕೆರೆ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ಕುದುರೆಮುಖ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ತುಂಗಾ, ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ನಿರಂತರ ಮಳೆಯಿಂದ ಮಲೆನಾಡಿನ ಜನರು ರೋಸಿ ಹೋಗಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ ಸಂಪರ್ಕ ಕಡಿತಗೊಂದು ಇಲ್ಲಿನ ಗ್ರಾಮೀಣ ಪ್ರದೇಶದ ಜನರು ಕತ್ತಲೆಯಲ್ಲಿ ದಿನ ದೂಡುವಂತಾಗಿದೆ. ಮನೆಗಳು ಧರೆಗುರುಳುತ್ತಿವೆ. ಮರಗಳು ಎಲ್ಲೆಂದರಲ್ಲಿ ಬೀಳುತ್ತಿದ್ದು ಒಟ್ಟಾರೆ ಎಡಬಿಡದೆ ಸುರಿಯುತ್ತಿರುವ ಮಳೆ ಮಲೆನಾಡಿನ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.