ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಕುಂಟಿನಮಡು ಗ್ರಾಮಸ್ಥರು 1.50 ಲಕ್ಷ ರೂ.ಗೂ ಅಧಿಕ ಮೊತ್ತದ ದಿನಬಳಕೆ ವಸ್ತುಗಳನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಗಮೇಶ್ವರಪೇಟೆ, ಬಾಳೆಹೊನ್ನೂರು ಪ್ರದೇಶಗಳಲ್ಲಿ ನೆರೆಯಿಂದ ಸೂರು ಕಳೆದುಕೊಂಡ ಸಂತ್ರಸ್ತರಿಗೆ ನೀಡಿದರು.
ಹೊಸ ಸೀರೆ, ಮಕ್ಕಳ ಉಡುಪು, ಉಲ್ಲನ್ ಮತ್ತು ಕಾಟನ್ ಹೊದಿಕೆಗಳು, ಪಂಚೆ, ಟವೆಲ್ಲು, ಐದು ಸಾವಿರ ಚಪಾತಿ, ಕೊಬ್ಬರಿಯಿಂದ ತಯಾರಿಸಿದ ಚಟ್ನಿ ಪುಡಿ, ನೀರಿನ ಬಾಟಲಿಗಳನ್ನು ವಾಹನದಲ್ಲಿ ತುಂಬಿಕೊಂಡು ಆಗಮಿಸಿದ್ದ ಗ್ರಾಮಸ್ಥರು, ಸಂಗಮೇಶ್ವರ ಪೇಟೆಯ ವಿದ್ಯಾರ್ಥಿ ನಿಲಯದ ಸಂತ್ರಸ್ತರ ಪರಿಹಾರ ಕೇಂದ್ರ, ಖಾಂಡ್ಯ, ಮಸಿಗದ್ದೆ ಮತ್ತು ಬಾಳೆಹೊನ್ನೂರಿನ ಸಮುದಾಯ ಭವನಗಳ ಸಂತ್ರಸ್ತರಿಗೆ ಜನಪ್ರತಿನಿಧಿಗಳ ಮೂಲಕ ವಿತರಿಸಿ ಮಾನವೀಯತೆ ಮೆರೆದರು.
ಕುಂಟಿನಮಡು ಗ್ರಾಮಸ್ಥರ ಪರವಾಗಿ ಸಾಮಗ್ರಿಗಳೊಂದಿಗೆ ಆಗಮಿಸಿದ್ದ ಗ್ರಾಮದ ಯುವ ಮುಖಂಡರಾದ ಕೆ.ಎಂ.ಸಂತೋಷ್, ಕೆ.ಎಸ್.ನಟರಾಜ್, ಕೆ.ಎಂ.ರವಿಕುಮಾರ್, ಅಣ್ಣಪ್ಪ, ದರ್ಶನ್, ಕುಮಾರ್, ವಿನಾಯಕ, ಹರ್ಷ ಹಾಗೂ ತಂಡದ ಸದಸ್ಯರು ಸಂಗಮೇಶ್ವರಪೇಟೆ, ಮಸಿಗದ್ದೆ ಮತ್ತು ಖಾಂಡ್ಯ ಸಂತ್ರಸ್ತರ ಕೇಂದ್ರಗಳಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮೂಲಕ ಸಂತ್ರಸ್ತರಿಗೆ ಹಸ್ತಾಂತರಿಸಿದರು.
ಬಾಳೆಹೊನ್ನೂರಿನ ಸಂತ್ರಸ್ತರ ಕೇಂದ್ರದಲ್ಲಿ ಉಳಿದ ಎಲ್ಲ ಸಾಮಗ್ರಿಗಳನ್ನು ವಿತರಿಸಲು ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಮಾಜಿ ಶಾಸಕಿ ಎ.ವಿ.ಗಾಯತ್ರಿ ಶಾಂತೇಗೌಡ ಅವರ ಮೂಲಕ ತರೀಕೆರೆ ವಿಭಾಗದ ಎಸಿ ರೂಪಾ ಅವರಿಗೆ ಹಸ್ತಾಂತರಿಸಿದರು. ಕುಂಟಿನಮಡು ಗ್ರಾಮಸ್ಥರ ಸೇವಾ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ತಂಡ ರಚಿಸಿಕೊಂಡು ಸಂತ್ರಸ್ತರ ಎಲ್ಲ ಪರಿಹಾರ ಕೇಂದ್ರಗಳಿಗೆ ಸಾಮಗ್ರಿ ವಿತರಿಸಲು ಕಾಂಗ್ರೆಸ್ ಮುಖಂಡರಾದ ಎಸ್.ಪೇಟೆ ಸತೀಶ್, ಜಯಶೀಲ, ಗುರುಮೂರ್ತಿ, ಮಹೇಶ್, ಗಣೇಶ್, ರಘು, ಮಸಿಗದ್ದೆ ಸತೀಶ್, ಮಂಜುನಾಥ್, ಸುಧಾಕರ್, ನಾರ್ಬರ್ ಪಿಂಟೋ, ಪ್ರಸನ್ನ, ಮೂರ್ತಿ ನೆರವಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ಅಂಶುಮಂತ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಚನ್ನಗಿರಿಗೌಡ, ಹಾಲಿ ಸದಸ್ಯರಾದ ಸದಾಶಿವ, ಚಂದ್ರಮ್ಮ, ತಾಪಂ ಸದಸ್ಯರಾದ ನಾಗೇಶ್, ಪ್ರವೀಣ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಹನೀಫ್, ಮುಖಂಡ ಹಿರಿಯಣ್ಣ, ಸುಧಾಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಸದಸ್ಯರಾದ ಆಶಾ, ಸುಚಿತ್ರಾ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರು ಹಾಜರಿದ್ದರು.